ಹೊಸ ಬಟ್ಟೆ ಧರಿಸದೆ ಪೆರ್ನಾಳ್ ಆಚರಿಸಿದ ಆ ಕಹಿ ನೆನಪು

Update: 2018-06-15 13:53 GMT

ಸುಮಾರು 15 ವರ್ಷದ ಹಿಂದಿನ ನೆನಪು. ನಾನು ಪೆರ್ನಾಳ್‌ಗೆ ಅಂಗಿ ಹೊಲಿಯಲು ಕೆಲವು ದಿನ ಮುಂಚೆಯೇ ದರ್ಜಿಯಲ್ಲಿ ಕೊಟ್ಟಿದ್ದೆ.ಹಾಗೇ ಪೆರ್ನಾಳ್

ಮುಂಚಿನ ದಿನ ಸಂಜೆ ಹೊಲಿದ ಅಂಗಿಯನ್ನು ಮನೆಗೆ ತೆಗೆದು ಕೊಂಡು ಬಂದೆ. ರಾತ್ರಿ ಊಟ ಮುಗಿಸಿ ನಿದ್ದೆ ಮಾಡುವ ಮುನ್ನ ‘ಒಮ್ಮೆ ನಿಮ್ಮ ಅಂಗಿ ಧರಿಸಿ ಸರಿಯಾಗಿದೆಯಾ ನೋಡಿ’ ಎಂದು ಪತ್ನಿ ಸೂಚಿಸಿದಳು. ಆದರೆ, ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದ ನಾನು ಬೆಳಗ್ಗೆ ನೋಡಿದರಾಯಿತು ಎಂದು ಉದಾಸೀನದಿಂದ ನಿದ್ದೆಗೆ ಜಾರಿದೆ.

ಮರುದಿನ ಬೆಳಗ್ಗೆ ಸ್ನಾನ ಮಾಡಿ ಇನ್ನೇನು ಪೆರ್ನಾಳ್ ನಮಾಝ್‌ಗೆ ಮಸೀದಿಗೆ ತಲುಪಲು ಅರ್ಧ ಗಂಟೆ ಇರುವಾಗ ಅಂಗಿ ಧರಿಸಲು ಮುಂದಾದಾಗ ನನಗೆ ಆಶ್ಚರ್ಯ. ಅಂಗಿ ಮತ್ತು ಪ್ಯಾಂಟ್ ಎರಡೂ ಟೈಟ್ ಆಗಿತ್ತು. ಅಂದರೆ, ಅದು ನನ್ನದಾಗಿರಲಿಲ್ಲ. ವಿಷಯ ತಿಳಿದ ಪತ್ನಿ ‘ನಿನ್ನೆ ರಾತ್ರಿಯೇ ಧರಿಸಿ ನೋಡಲು ಹೇಳಿದ್ದೆ. ಕೇಳಿದ್ರಾ... ರಾತ್ರಿಯೇ ನೋಡಿದ್ದರೆ ಇದು ಕೊಟ್ಟು ನಿಮ್ಮ ಅಂಗಿ-ಪ್ಯಾಂಟ್ ತರಬಹುದಿತ್ತು’ ಎಂದು ತರಾಟೆಗೆ ತೆಗೆದುಕೊಂಡಳು.

ನಾನು ಏನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಉಪಾಯವಿಲ್ಲದೆ ಹೊಸ ಅಂಗಿಯ ಬದಲು ಒಂದು ವರ್ಷಕ್ಕೆ ಮೊದಲು ತೆಗೆದ ಕುರ್ತಾ ಧರಿಸಿ ಮಸೀದಿಗೆ ತೆರಳಿದೆ. ಮಸೀದಿಯಿಂದ ಬಂದವನೇ ನೇರ ಟೈಲರ್ ಅಂಗಡಿಗೆ ತೆರಳಿದೆ. ಆದರೆ ಆ ಟೈಲರ್ ಅಂಗಡಿ ಅಂದು ಬಂದ್ ಆಗಿತ್ತು. ನಿರಾಶೆಯಿಂದ ಹಿಂದಿರುಗಿದೆ.

ಪೆರ್ನಾಳ್‌ನ ಮರುದಿನ ಆ ಬಟ್ಟೆ ಅಂಗಿ-ಪ್ಯಾಂಟ್‌ನ್ನು ತೆಗೆದುಕೊಂಡು ಟೈಲರ್ ಬಳಿಗೆ ಹೋದೆ. ‘ನಿಮ್ಮ ಡ್ರೆಸ್ ಕೊಂಡು ಹೋದವರು ನಿನ್ನೆ ರಾತ್ರಿಯೇ ವಾಪಸ್ ತಂದಿದ್ದರು. ನೀವು ಮೊನ್ನೆ ರಾತ್ರಿಯೇ ಬಂದಿದ್ದರೆ ಕೊಂಡು ಹೋಗಬಹುದಿತ್ತು’ಎಂದು ಕ್ಷಮೆಯಾಚನೆಯ ಧಾಟಿಯಲ್ಲಿ ಮಾತನಾಡಿದರು.

ನಾನು ನನ್ನದೇ ಆಲಸ್ಯದಿಂದ ಆದ ತಪ್ಪಿಗೆ ವೌನ ವಹಿಸಿ ಆ ಬಟ್ಟೆಯನ್ನು ದೊಡ್ಡ ಪೆರ್ನಾಳ್ (ಬಕ್ರೀದ್)ಗೆ ಹಾಕಿ ಸಂಭ್ರಮ ಪಟ್ಟೆ.

ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News