ಫಿತ್ರ್ ಝಕಾತ್‌ನ ಅಕ್ಕಿ ಅಳೆದು ಕೊಡಲು ಕಾದಾಟ!

Update: 2018-06-15 14:32 GMT

ನನ್ನ ಬಾಲ್ಯದ ಪೆರ್ನಾಳ್ ದಿನಗಳನ್ನು ನೆನಪಿಸುವಾಗ ತುಂಬಾ ಖುಷಿಯಾಗುತ್ತಿದೆ. ಫಿತ್ರ್ ಝಕಾತ್‌ಗಾಗಿ ಮನೆ ಬಾಗಿಲಿಗೆ ಬರುವವರಿಗೆ ಅಕ್ಕಿಯನ್ನು ಅವರ ಚೀಲಗಳಿಗೆ ಅಳತೆ ಮಾಡಿ ಕೊಡಲು ನಾನು ಮತ್ತು ನನ್ನ ಸಹೋದರ ಜೊತೆ ಜಗಳ ಮಾಡುವ ಪೆರ್ನಾಳ್‌ನ ಮುಂಜಾನೆಯ ಆ ದಿನಗಳು, ಪೆರ್ನಾಳ್ ನಮಾಝ್‌ನ ನಂತರ ಸ್ನೇಹಿತರ ಜೊತೆ ಸೇರಿ ಅದೆಷ್ಟೋ ಕಿಲೋ ಮೀಟರ್ ನಡೆದುಕೊಂಡೇ ನಮ್ಮ ಊರಿನ ಒಂದೇ ಒಂದು ಮನೆಯನ್ನೂ ಬಿಡದೆ ಪ್ರತಿಯೊಂದು ಮನೆಗೂ ಭೇಟಿ ಕೊಡುತಿದ್ದ ದಿನಗಳು, ಪ್ರೀತಿಯಿಂದ ಭೇಟಿಕೊಟ್ಟಾಗ ಸಂಬಂಧಿಕರ ಮನೆಗಳಲ್ಲಿ ಕೊಟ್ಟ ಒಂದಿಷ್ಟು ಹಣವನ್ನು ಎಣಿಸಿಕೊಂಡು ಮಧ್ಯಾಹ್ನ ದೇರಳಕಟ್ಟೆಯ ಇಬ್ರಾಯಾಕರ ಸೈಕಲ್ ಶಾಪ್‌ಗೆ ಹೋಗಿ ಸೈಕಲ್ ಬಾಡಿಗೆ ಪಡೆದು ದೇರಳಕಟ್ಟೆಯ ಮೈದಾನವಿಡೀ ಸುತ್ತಾಡಿ ಸಂಜೆಯ ವೇಳೆಗೆ ಮನೆ ಸೇರುತ್ತಿದ್ದ ಆ ದಿನಗಳ ಸವಿ ನೆನಪುಗಳು ನನ್ನ ಕಣ್ಣ ಮುಂದೆ ಬರುತ್ತಿವೆ...

ತದನಂತರ ನಾನು ಸೌದಿ ಅರೇಬಿಯಾದಲ್ಲಿದ್ದ ಸಮಯದಲ್ಲಿ ಪೆರ್ನಾಳ್ ದಿವಸ ನಾನು ನನ್ನ ಸಹೋದರರಾದ ನಾಸಿರ್, ಮೊಹಿಷೀರ್, ಸ್ನೇಹಿತರಾದ ಮುತ್ತಲಿಬ್, ಹಾರಿಸ್, ಮಕ್ಸೂದ್, ಹಮೀದಾಕ, ಹನೀಫ್,ಅನ್ಸಾರ್ ಕಣ್ಮಣಿ, ಮುಸ್ತ್ತಫ, ಮಿರ್ಷಾದ್ ಎಲ್ಲರೂ ಒಟ್ಟಿಗೆ ಪೆರ್ನಾಳ್ ನಮಾಝ್ ಮಾಡಿ ಬಂದು ಬಿರಿಯಾನಿ ಮಾಡಲು ತಯಾರಾಗಿ ನಿಂತಾಗ ಗ್ಯಾಸ್ ಮುಗಿದಾಗಿನ ದಿಗಿಲು, ಅಂದು ರಜೆ ಇದ್ದ ಕಾರಣ ಎಲ್ಲೂ ಗ್ಯಾಸ್ ಸಿಲಿಂಡರ್ ಸಿಗದೆ ಇದ್ದಾಗ ಪಕ್ಕದ ಫ್ಲಾಟಿನಲ್ಲಿದ್ದ ಯಮನ್ ದೇಶದ ಪ್ರಜೆ ಮಹಮೂದ್ ಎಂಬವರ ಮನೆಯ ಗ್ಯಾಸ್ ಸಿಲಿಂಡರ್ ಹೊತ್ತು ತಂದು ಬಿರಿಯಾನಿ ಮಾಡಿ ಒಟ್ಟಿಗೆ ಸೇರಿ ಪೆರ್ನಾಳ್‌ನ ಸಂಭ್ರಮ ಸವಿದದ್ದನ್ನು ಮರೆಯುವಂತಿಲ್ಲ.

ಪೆರ್ನಾಳ್ ದಿವಸ ಪ್ರತಿಯೊಬ್ಬ ಅನಿವಾಸಿ ಭಾರತೀಯ ತನ್ನ ಮನೆಯವರು, ಕುಟುಂಬಸ್ಥರು, ಬಾಲ್ಯದ ಸ್ನೇಹಿತರು, ಬಾಲ್ಯದ ಸವಿ ನೆನಪುಗಳನ್ನು ಜ್ಞಾಪಿಸಿಕೊಳ್ಳುವುದು ಸಹಜ. ಆವಾಗೆಲ್ಲಾ ಊರಿನ ಪೆರ್ನಾಳ್ ಸಡಗರವನ್ನು ನೆನೆದು ಕಣೀರಿಟ್ಟ ಸಂದರ್ಭಗಳೂ ಇವೆ.

ಮನ್ಸೂರ್ ಅಹ್ಮದ್ ಸಾಮಣಿಗೆ

(ಸಾಮಾಜಿಕ ಕಾರ್ಯಕರ್ತರು, ಅಸೈಗೋಳಿ-ಕೊಣಾಜೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News