ಶವ್ವಾಲ್‌ನ ಮೊದಲ ಚಂದ್ರನನ್ನು ನಾನೇ ಕಂಡೆನೆಂಬ ಹೆಮ್ಮೆ

Update: 2018-06-15 17:54 GMT

ಪೆರ್ನಾಳ್ ಹಬ್ಬದ ಚಂದ್ರದರ್ಶನದ ಸಂಭಾವ್ಯದ ದಿನ ಮನೆಯ ಹಿಂದುಗಡೆಯಿದ್ದ ಎತ್ತರದ ಮಣಿಪದವುಗುಡ್ಡೆಗೆ ಗೆಳೆಯರೊಂದಿಗೆ ಚಂದ್ರದರ್ಶನಕ್ಕೆಂದು ಹೋಗುತ್ತಿದ್ದ ನೆನಪು ಇನ್ನೂ ಹಸಿರು. ಚಂದ್ರದರ್ಶನವಾಯಿತೆಂದರೆ ನಾನೇ ಆ ಊರಿಗೆ ಮೊದಲಿಗನಾಗಿ ದರ್ಶನ ಮಾಡಿದವನೆಂಬ ಹೆಮ್ಮೆ ಮನದಲ್ಲಿ ಮೂಡುತ್ತಿತ್ತು. ತಕ್ಷಣ ಅಲ್ಲಿಯೇ ಗೆಳೆಯರೊಂದಿಗೆ ಕೂಡಿ ಏರುಧ್ವನಿಯಲ್ಲಿ ತಕ್ಬೀರ್ ಧ್ವನಿ ಮೊಳಗಿಸುತ್ತಿದ್ದ ನೆನಪು ಯಾವತ್ತೂ ಮರೆಯಲಾಗದು.

ಪೆರ್ನಾಳ್‌ನ ಹಿಂದಿನ ರಾತ್ರಿಯೇ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. ಟ್ರಾಲ್‌ಗಾಗಿ ಹೊಸ ಉಡುಪನ್ನು ರಾತ್ರಿಯೇ ಧರಿಸಿ ಸಂಭ್ರಮಿಸಿದಾಗ ಉಮ್ಮ ಇಂದೇ ಏಕೆ ಹಾಕಿದೆ ಎಂದು ಗದರಿಸುತ್ತಿದ್ದರು. ನಿರೀಕ್ಷಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಪೆರ್ನಾಳ್ ಹಬ್ಬದ ಘೋಷಣೆಯಾದರೆ ಹೊಸ ಉಡುಪು ಹೊಲಿಯಲು ಕೊಟ್ಟ ನಮ್ಮೂರಿನ ಏಕೈಕ ಟೈಲರಾಗಿದ್ದ ಕುಂಞಿ ಬಲ್ಯಾಯರ ಅಂಗಡಿಗೆ ಹಬ್ಬದಂದೇ ಬೆಳಗ್ಗೆ ದೌಡಾಯಿಸುವುದು, ಅಲ್ಲಿಯೂ ನನ್ನಂತೆ ಹೊಲಿಸಲು ಕೊಟ್ಟ ಅಂಗಿ-ಪ್ಯಾಂಟ್‌ಗಾಗಿ ಜನರ ಕ್ಯೂ, ಕೆಲವೊಂದು ಬಾರಿ ಹೊಲಿದು ಉಡುಪು ಸಿಗುವುದು ತಡವಾದುದರಿಂದ ಪೆರ್ನಾಳ್ ನಮಾಝ್ ತಪ್ಪಿದ್ದೂ ಉಂಟು.

ಫಿತ್ರ್ ಝಕಾತ್ ಬಾಬ್ತು ಅಪ್ಪಅಕ್ಕಪಕ್ಕದವರಿಗೆ ಸೇರಿನಲ್ಲಿ ಅಳೆದುಕೊಡುತ್ತಿದ್ದ ಅಕ್ಕಿ, ಅದಕ್ಕಾಗಿ ಮನೆಗೆ ಬರುತ್ತಿದ್ದವರಿಗೆ ಚಹಾ-ತಿಂಡಿ ಕುಡಿದೇ ಹೋಗಬೇಕೆಂಬ ಅಪ್ಪನ ತಾಕೀತು ಇವೆಲ್ಲ ಕೇವಲ ನೆನಪಾಗಿ ಉಳಿದಿದೆ. ಗಂಡು ಮಕ್ಕಳು ಅಪ್ಪನ ಜೊತೆ 1 ಕಿಲೋ ಮೀಟರ್ ದೂರದ ಪೊಯ್ಯತ್ತಬೈಲ್ ಮಸೀದಿಗೆಕಾಲ್ನಡಿಗೆಯಲ್ಲೇ ಬಯಲು ದಾರಿಯಲ್ಲಿ ಸಾಗುತ್ತಿದ್ದೆವು.

ಪೆರ್ನಾಳ್ ದಿನಕ್ಕೆಂದು ಗಂಧಸಾಲೆ ಭತ್ತವನ್ನು ಅಮ್ಮ ಸ್ವತ: ಒನಕೆಯಿಂದ ಕುಟ್ಟಿ ಅಕ್ಕಿ ಮಾಡಿ ತೆಗೆದಿರಿಸುತ್ತಿದ್ದ ನೆನಪು,ಆ ದಿನಗಳಲ್ಲಿ ಮನೆಯಲ್ಲೇ ನಾವು ಸಾಕುತ್ತಿದ್ದ ನಾಟಿಕೋಳಿಗಳಲ್ಲಿ ಒಂದು ಹುಂಜವನ್ನು ಪದಾರ್ಥ ಮಾಡಲೆಂದು ಮೀಸಲಿಟ್ಟದ್ದು, ಹಬ್ಬದಂದು ಹಿರಿಯಣ್ಣ ಅದರ ಕತ್ತನ್ನು ‘ಬಿಸಿ’್ಮ ಉಚ್ಚರಿಸಿ ಕುಯ್ದದ್ದು, ಗಂಧಸಾಲೆಯ ಅಕ್ಕಿಯ ಇಡ್ಲಿ, ಕೇವಲ ಹಬ್ಬದಂದು ಮಾತ್ರ ಮಾಡುತ್ತಿದ್ದ ತುಪ್ಪದ ಅನ್ನದ ಸವಿ ನೆನಪಾಗಿ ಉಳಿದಿದೆ. ಅಂದಿನ ದಿನಗಳಲ್ಲಿ ಕುಟುಂಬಸ್ಥರು, ದೂರದ ಸಂಬಂಧಿಗಳು ಬಂದು ಜೊತೆ ಜೊತೆಯಾಗಿಯೇ ಕಲೆತು ಬೆರೆತು ಸಂಭ್ರಮಿಸಿದ ದಿನಗಳು ಇಂದಿಗೆ ಮಸುಕಾಗುತ್ತಿರುವುದು ಸುಳ್ಳಲ್ಲ.

ಇಸ್ಮಾಯೀಲ್ ತುಪ್ಪೆ

ಉಪ ಪ್ರಾಂಶುಪಾಲರು, ಮದನಿ ಪಿಯು ಕಾಲೇಜು ಉಳ್ಳಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News