ಹೊಸ ವಸ್ತ್ರದ ಬಣ್ಣ ಹಿಡಿಸದಿದ್ದರೂ....

Update: 2018-06-15 17:39 GMT

ಪೆರ್ನಾಳ್ ಪ್ರತಿ ವರ್ಷವೂ ನಮಗೆ ಸವಿ ನೆನಪು ನೀಡುವ ಹಬ್ಬ. ಪೆರ್ನಾಳ್ ಸವಿ ನೆನಪನ್ನು ಹಂಚಿಕೊಳ್ಳುವಾಗ ನಾನು ಮದುಮಗಳಾಗಿ ಕಾಲಿಟ್ಟ ಕೆಲ ದಿನಗಳಲ್ಲೇ ಆಗಮಿಸಿದ ಪೆರ್ನಾಳ್ ನನಗೆ ನೆನಪಾಗುತ್ತಿದೆ. ಅಷ್ಟರವರೆಗೆ ಉಮ್ಮ, ಅಕ್ಕ, ಅಣ್ಣಂದಿರೊಂದಿಗೆ ಸಂಭ್ರಮಿಸುತ್ತಿದ್ದ ನನಗೆ ಅವರ ಆ ಪ್ರೀತಿಗೆ ಕೊರತೆಯಾಗದಂತೆ ಪ್ರೀತಿಸುವ ಪತಿ, ಅತ್ತೆ, ಮಾವ, ಸ್ನೇಹಿತೆಯರಂತೆ ಕಾಣುವ ನಾದಿನಿಯರು, ಅಣ್ಣನಂತೆ ಕಾಳಜಿ ತೋರಿಸುವ ಮೈದುನ ಇವರೆಲ್ಲರ ನಡುವೆ ಅಂದಿನ ಹಬ್ಬ ನನ್ನನ್ನು ಸಂತೋಷದ ಕಡಲಲ್ಲಿ ತೇಲಿಸುವಂತೆ ಮಾಡಿತ್ತು.

ನನಗಾಗಿ ಪತಿ ಖರೀದಿಸಿ ತಂದ ಹೊಸ ವಸ್ತ್ರ ಬಣ್ಣ ಅಲ್ಪಇಷ್ಟವಾಗಿರದಿದ್ದರೂ ಪತಿಯ ಪ್ರೀತಿಯ ಮುಂದೆ ನನಗೆ ಅದು ತುಂಬಾ ಸುಂದರವಾಗಿ ಕಂಡಿತ್ತು. ನಿನಗೆ ಇಷ್ಟ ಆಗದಿದ್ದರೆ ಬದಲಾಯಿಸಿ ತರೋಣ ಎಂಬ ಮಾತನ್ನು ತಡೆದು ‘ಇಲ್ಲ ತುಂಬಾ ಸುಂದರವಾಗಿದೆ. ನಾನಿದುವರೆಗೂ ಇಷ್ಟು ಚಂದದ ಡ್ರೆಸ್ ತೊಟ್ಟವಳೇ ಅಲ್ಲ’ ಎಂದು ಎದೆಗಪ್ಪಿಕೊಂಡಿದ್ದೆ. ಮನೆಯ ಸದಸ್ಯರಿಗೆಲ್ಲರಿಗೂ ಸ್ವತಃ ತಾನೇ ಹೊಸ ವಸ್ತ್ರ ತಂದು ಕೊಡುತ್ತಿದ್ದ ಪತಿಯ ಕಡೆಗೆ ಅಭಿಮಾನದ ನೋಟ ಬೀರಿದ್ದು ಇಂದೂ ನೆನಪಾಗುತ್ತಿದೆ.

ಜೊತೆಗೆ ಹಿಂದೂ, ಮುಸ್ಲಿಂ ಭೇದವಿಲ್ಲದೆ ನೆರೆಮನೆಯ ಎಲ್ಲಾ ಹುಡುಗಿಯರಿಗೆ ಹಬ್ಬದ ಮೊದಲ ದಿನ ಮೆಹಂದಿ ನೀಡುವುದು ವಾಡಿಕೆಯಾಗಿತ್ತು. ಜಲೀಲಣ್ಣ ಮೆಹಂದಿ ತರುವುದನ್ನೇ ಕಾಯುತ್ತಿದ್ದ ಹುಡುಗಿಯರು... ಅವರ ಕಣ್ಣುಗಳಲ್ಲಿದ್ದ ಹೊಳಪು.. ನನಗೆ ಇದು ಹೊಸ ಅನುಭವ. ನೆರೆಮನೆಯ ಹುಡುಗಿ ವಾಣಿ ನನ್ನ ಕೈಗಳಿಗೆ ಬಿಡಿಸಿದ ಮೆಹಂದಿಯ ಚಿತ್ತಾರ ಸವಿನೆನಪಾಗಿ ಉಳಿದಿದೆ. ಮೊದಲ ಹಬ್ಬದ ಸಂಭ್ರಮದಲ್ಲಿ ಸಂಜೆಯಾಗುತ್ತಿರಲು ತವರಿನ ಕಡೆಗೆ ಮನಸ್ಸು ಓಡಿತ್ತು. ಪತಿಯ ಜೊತೆಯಲ್ಲಿ ಸುತ್ತಾಡಿ ತವರಿಗೆ ತಲುಪಿ ಅಲ್ಲಿ ರಾತ್ರಿಯವರೆಗೆ ಆಚರಿಸಿದ ಪೆರ್ನಾಳ್ ಮರೆಯಲಾಗದ ಸವಿನೆನಪು.

ಆಯಿಷಾ ಯು.ಕೆ. ಉಳ್ಳಾಲ (ಸದಸ್ಯೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News