ಉತ್ತರ ಪ್ರದೇಶ: ಶ್ರೇಷ್ಠ ವ್ಯಕ್ತಿಗಳ ಜೀವನಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಲು ಆದಿತ್ಯನಾಥ್ ಸೂಚನೆ

Update: 2018-06-16 04:17 GMT

ಲಕ್ನೋ, ಜೂ. 16: ನಾಥಪಂಥದ ಗುರು ಬಾಬಾ ಗೋರಖ್‌ನಾಥ್, ಬಾಬಾ ಗಂಭೀರನಾಥ್, ಸ್ವಾತಂತ್ರ್ಯ ಹೋರಾಟಗಾರರಾದ ಬಂಧು ಸಿಂಗ್ ಮತ್ತು ರಾಣಿ ಅವಂತಿಬಾಯಿ, 12ನೇ ಶತಮಾನದ ಯೋಧ ಸಹೋದರರಾದ ಅಲ್ಹಾ- ಉದಾಲ್ ಅವರ ಜೀವನ ಚರಿತ್ರೆಗಳನ್ನು ಉತ್ತರ ಪ್ರದೇಶ ಪಠ್ಯದಲ್ಲಿ ಸೇರಿಸಲಾಗಿದೆ.

ತರಗತಿಗಳು ಜುಲೈನಿಂದ ಆರಂಭವಾಗಲಿದ್ದು, ಪ್ರಸ್ತುತ ವರ್ಷದಿಂದಲೇ ಹೊಸ ಪಠ್ಯ ಜಾರಿಗೆ ಬರಲಿದೆ. ರಾಜ್ಯದ ಹಿಂದಿನ ಆಡಳಿತ ಅವಧಿಯಲ್ಲಿ ನಿರ್ಲಕ್ಷಿಸಲ್ಪಟ್ಟ ಶ್ರೇಷ್ಠ ವ್ಯಕ್ತಿಗಳ ಜೀವನಚರಿತ್ರೆಯನ್ನು ಪಠ್ಯದಲ್ಲಿ ತಕ್ಷಣ ಸೇರಿಸುವಂತೆ ಮೂಲ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಆದಿತ್ಯನಾಥ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಠ್ಯವನ್ನು ಪರಿಷ್ಕರಿಸಲಾಗಿದೆ.

ಗೋರಖ್‌ಪುರದಿಂದ ಸತತ ಐದು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದ ಆದಿತ್ಯನಾಥ್, ಪೂರ್ವ ಉತ್ತರ ಪ್ರದೇಶದ ಪ್ರಮುಖ ಯಾತ್ರಾಸ್ಥಳವಾದ ಗೋರಖ್‌ನಾಥ್ ದೇವಾಲಯದ ಮುಖ್ಯ ಅರ್ಚಕರೂ ಆಗಿದ್ದರು.

"ಈ ಬಾರಿ ಪಠ್ಯದಲ್ಲಿ ಕೆಲ ಬದಲಾವಣೆಗಳನ್ನು ಸೂಚಿಸಲಾಗಿದೆ. ಒಂದರಿಂದ ಎಂಟನೇ ತರಗತಿವರೆಗಿನ ಪಠ್ಯವನ್ನು ಪರಿಷ್ಕರಿಸಲಾಗಿದೆ" ಎಂದು ಮೂಲಶಿಕ್ಷಣ ಅಧಿಕಾರಿ ಭೂಪೇಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ. ಗುರು ಗೋರಖ್‌ನಾಥ್ ಅವರ ಜೀವನಚಿತ್ರವನ್ನು ಆರನೇ ತರಗತಿಯ "ಮಹಾನ್ ವ್ಯಕ್ತಿತ್ವ" ಎಂಬ ಆರನೇ ಅಧ್ಯಾಯದಲ್ಲಿ ಸೇರಿಸಲಾಗಿದೆ. ಅಂತೆಯೇ ಗಂಭೀರನಾಥ್, ಬಂಧು ಸಿಂಗ್, ಅವಂತಿಬಾಯಿ, ವೀರ್ ಅಲ್ಹಾ ಅವರ ಕುರಿತ ಅಧ್ಯಾಯಗಳನ್ನು ಒಂದರಿಂದ ಎಂಟನೇ ತರಗತಿಯ ವಿವಿಧ ಪಠ್ಯಗಳಲ್ಲಿ ಸೇರಿಸಲಾಗಿದೆ.

ಬಂಧು ಸಿಂಗ್ ಕುರಿತ ಅಧ್ಯಾಯದಲ್ಲಿ ಅವರು ಹೇಗೆ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ವೀರಾವೇಶದಿಂದ ಹೋರಾಡಿದರು ಮತ್ತು ಸಾರ್ವಜನಿಕವಾಗಿ ಅವರನ್ನು 1857ರ ಆಗಸ್ಟ್ 12ರಂದು ಗೋರಖ್‌ಪುರದ ಅಲಿನಗರ ಕ್ರಾಸಿಂಗ್‌ನಲ್ಲಿ ಗಲ್ಲಿಗೇರಿಸಲಾಯಿತು ಎನ್ನುವುದನ್ನು ವಿವರಿಸಲಾಗಿದೆ. ಅಂತೆಯೇ ಬುಂಡೇಲ್‌ಖಂಡ್ ಸಹೋದರರಾದ ಅಲ್ಹಾ- ಉದಾಲ್ ಅವರ ಜೀವನಚರಿತ್ರೆಯನ್ನು ಮಕ್ಕಳಿಗೆ ಸ್ಫೂರ್ತಿ ನೀಡುವ ಸಲುವಾಗಿ ಸೇರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹೊಸ ಪಠ್ಯದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಇದನ್ನು ಸ್ಕ್ಯಾನ್ ಮಾಡುವ ಮೂಲಕ ಈ ಅಧ್ಯಾಯಗಳ ಡಿಜಿಟಲ್ ಆವೃತ್ತಿಯನ್ನು ಮೊಬೈಲ್ ಫೋನ್‌ಗಳಲ್ಲಿ ವೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News