ಈ ಬಾರಿ ಈದ್ ಪ್ರಯುಕ್ತ ವಾಘಾ ಗಡಿಯಲ್ಲಿ ಸಿಹಿ ತಿಂಡಿ ವಿನಿಮಯವಿಲ್ಲ
ಹೊಸದಿಲ್ಲಿ, ಜೂ.16: ಗಡಿರೇಖೆಯಲ್ಲಿ ನಿರಂತರವಾಗಿ ಯುದ್ದ ವಿರಾಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಬಂಧ ಹದಗೆಟ್ಟಿದೆ. ಈದ್ ಪ್ರಯುಕ್ತ ಸಾಂಪ್ರದಾಯಿಕವಾಗಿ ಪ್ರತಿವರ್ಷ ಉಭಯ ದೇಶಗಳ ಭದ್ರತಾ ಸಿಬ್ಬಂದಿ ಆಚರಿಸಿಕೊಂಡು ಬರುತ್ತಿರುವ ಸಿಹಿ ತಿಂಡಿ ವಿನಿಮಯವನ್ನು ಈ ಬಾರಿ ಮಾಡದಿರಲು ನಿರ್ಧರಿಸಿವೆ.
ಗಡಿ ಭದ್ರತಾ ಪಡೆಗಳು(ಬಿಎಸ್‌ಎಫ್) ಹಾಗೂ ಪಾಕಿಸ್ತಾನದ ರೇಂಜರ್‌ಗಳು ರಮಝಾನ್ ಪ್ರಯುಕ್ತ ವಾಘಾ ಗಡಿಯಲ್ಲಿ ಸಿಹಿತಿಂಡಿ ಹಂಚಿಕೊಳ್ಳುವ ದೃಶ್ಯ ಈ ಬಾರಿ ಕಂಡು ಬಂದಿಲ್ಲ.
ಶನಿವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನ ಗಡಿ ರೇಖೆಯಲ್ಲಿ ಪಾಕಿಸ್ತಾನ ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಗೆ ಭಾರತದ ಓರ್ವ ಸೈನಿಕ ಹುತಾತ್ಮನಾಗಿದ್ದಾನೆ.
ಮಂಗಳವಾರ ರಾತ್ರಿ ಸಾಂಬಾ ಜಿಲ್ಲೆಯ ರಾಮಗಢ್ ಸೆಕ್ಟರ್‌ನ ಅಂತರ್‌ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ರೇಂಜರ್ಸ್‌ಗಳು ಯುದ್ದ ವಿರಾಮವನ್ನು ಉಲ್ಲಂಘಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಸಹಿತ ನಾಲ್ವರು ಬಿಎಸ್‌ಎಫ್ ಯೋಧರನ್ನು ಹತ್ಯೆಗೈದಿದ್ದರು.