ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಪೇರರಿವಾಲನ್ ಗೆ ‘ದಯಾ ಮರಣ’ ನೀಡಿ: ತಾಯಿ ಅರ್ಪುತಮ್ಮಾಳ್ ಮೊರೆ

Update: 2018-06-16 14:38 GMT

ಚೆನ್ನೈ,ಜೂ.16: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳ ಬಿಡುಗಡೆಯನ್ನು ಕೋರಿ ತಮಿಳುನಾಡು ಸರಕಾರವು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಅವರ ಪೈಕಿ ಓರ್ವನಾಗಿರುವ ಎ.ಜಿ.ಪೇರರಿವಾಲನ್ನ ತಾಯಿ ಅರ್ಪುತಮ್ಮಾಳ್ ತನ್ನ ಮಗನಿಗೆ ‘ದಯಾ ಮರಣ’ವನ್ನು ನೀಡುವಂತೆ ಆಗ್ರಹಿಸಿದ್ದಾರೆ.

ತನ್ನ ಮಗ ಸೇರಿದಂತೆ ಪ್ರಕರಣದಲ್ಲಿಯ ಎಲ್ಲ ಅಪರಾಧಿಗಳ ಬಿಡುಗಡೆಯ ಪರ ತಾನು ಒಲವು ಹೊಂದಿದ್ದೇನೆ ಎಂದು ತಮಿಳುನಾಡು ಸರಕಾರವು ಇತ್ತೀಚಿಗೆ ಪುನರುಚ್ಚರಿಸಿದ್ದನ್ನು ಅರ್ಪುತಮ್ಮಾಳ್ ನೆನಪಿಸಿಕೊಂಡಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೇರರಿವಾಲನ್, ಮುರುಗನ್, ಸಂತಾನ್, ಜಯಕುಮಾರ,ರಾಬರ್ಟ್ ಪಾಯಸ್,ರವಿಚಂದ್ರನ್ ಮತ್ತು ನಳಿನಿ ಕಳೆದ 20 ವರ್ಷಗಳಿಗೂ ಅಧಿಕ ಸಮಯದಿಂದ ಜೈಲಿನಲ್ಲಿದ್ದಾರೆ.

ಶನಿವಾರ ವೆಲ್ಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಪುತಮ್ಮಾಳ್ ,‘‘ಸುದೀರ್ಘ ಕಾನೂನು ಹೋರಾಟಗಳು ಮತ್ತು ಇತ್ತೀಚಿನ ಬೆಳವಣಿಗೆಯ ಬಳಿಕ ನಾವೀಗ ಹತಾಶರಾಗಿದ್ದೇವೆ. ಈ ಬದುಕು ನಮಗೆ ಸಾಕಾಗಿಹೋಗಿದೆ. ನಮ್ಮನ್ನು ಕೊಲ್ಲುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅರ್ಜಿ ಸಲ್ಲಿಸಲು ನಾನು ಯೋಚಿಸುತ್ತಿದ್ದೇನೆ. ದಯವಿಟ್ಟು ನನ್ನ ಮಗನಿಗೆ ದಯಾ ಮರಣ ನೀಡಿ’’ ಎಂದು ಹೇಳಿದರು.

 ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ನೆಪದಲ್ಲಿ ಪೊಲೀಸರು ಆಗ 19ರ ಹರೆಯದ ತನ್ನ ಮಗನನ್ನು ವಶಕ್ಕೆ ತೆಗೆದುಕೊಂಡಿದ್ದರು. ಈಗ ಆತನಿಗೆ 47 ವರ್ಷಗಳಾಗಿವೆ. ತನ್ನ ಯೌವನ ಮತ್ತು ಬದುಕಿನ ಮುಖ್ಯಘಟ್ಟವನ್ನು ಆತ ಕಳೆದುಕೊಂಡಿದ್ದಾನೆ ಎಂದ ಅವರು,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ತನ್ನ ತಂದೆಯ ಕೊಲೆ ಪ್ರಕರಣದ ಅಪರಾಧಿಗಳನ್ನು ಕ್ಷಮಿಸಿದ್ದಾರೆ ಎಂದು ಬೆಟ್ಟು ಮಾಡಿದರು.

1991,ಮೇ ತಿಂಗಳಲ್ಲಿ ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಚುನಾವಣಾ ರ್ಯಾಲಿಯ ಸಂದರ್ಭದಲ್ಲಿ ರಾಜೀವ ಗಾಂಧಿಯವರ ಹತ್ಯೆಗೆ ಬಳಕೆಯಾಗಿದ್ದ ಬೆಲ್ಟ್ ಬಾಂಬ್‌ನಲ್ಲಿದ್ದ ಎರಡು ಬ್ಯಾಟರಿಗಳನ್ನು ಪೇರರಿವಾಲನ್ ಒದಗಿಸಿದ್ದ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News