ಎಸ್‌ಪಿ ಮುಖಂಡ ಶಿವಪಾಲ್ ಭೇಟಿಯಾದ ಆದಿತ್ಯನಾಥ್ ಸಂಪುಟದ ಸಚಿವ
ಲಕ್ನೊ, ಜೂ.16: ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷ(ಎಸ್‌ಪಿ)ದ ಮುಖ್ಯಸ್ಥ ಅಖಿಲೇಶ್ ಯಾದವ್‌ರನ್ನು ಸಮರ್ಥಿಸಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಆದಿತ್ಯನಾಥ್ ಸಂಪುಟದ ಸಚಿವ ಓಂಪ್ರಕಾಶ್ ರಾಜ್‌ಭರ್ ಇದೀಗ ಮತೋರ್ವ ಎಸ್‌ಪಿ ಮುಖಂಡ ಶಿವಪಾಲ್ ಯಾದವ್‌ರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಓಂಪ್ರಕಾಶ್ ರಾಜ್‌ಭರ್ ಅವರು ಸುಹೈಲ್‌ದೇವ್ ಬಹುಜನ ಸಮಾಜ ಪಕ್ಷ (ಎಸ್‌ಬಿಎಸ್‌ಪಿ)ದ ಅಧ್ಯಕ್ಷರಾಗಿದ್ದು, ಉತ್ತರ ಪ್ರದೇಶದ ಸರಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ. ವಾರಾಣಸಿಯ ಸರ್ಕ್ಯೂಟ್ ಹೌಸ್‌ನಲ್ಲಿ ಉಭಯ ಮುಖಂಡರು 15 ನಿಮಿಷ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಅಖಿಲೇಶ್ ಯಾದವ್ ತಮ್ಮ ಸರಕಾರಿ ಬಂಗಲೆಯನ್ನು ತೆರವುಗೊಳಿಸುವ ಮೊದಲು ಬಂಗಲೆಯ ನೆಲಕ್ಕೆ ಅಳವಡಿಸಲಾಗಿದ್ದ ‘ಟೈಲ್ಸ್’ಗಳನ್ನು ಹಾಗೂ ಬಾತ್‌ರೂಂನಲ್ಲಿದ್ದ ನಳ್ಳಿಗಳನ್ನು ಕಿತ್ತು ಕೊಂಡೊಯ್ದಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್‌ಭರ್, ಅಖಿಲೇಶ್ ಈ ರೀತಿ ಮಾಡಿದ್ದಾರೆ ಎಂಬುದನ್ನು ನಾನು ನಂಬುವುದಿಲ್ಲ. ಅವರ ಸ್ಥಾನದಲ್ಲಿರುವ ಯಾವ ರಾಜಕಾರಣಿಯೂ ಹೀಗೆ ಮಾಡಲಿಕ್ಕಿಲ್ಲ ಎಂದು ಹೇಳಿದ್ದರು.