ನಾನೇಕೆ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ?

Update: 2018-06-18 16:36 GMT

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಹಾಗು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರ ತಂಡದಲ್ಲಿದ್ದ ಶಿವಂ ಶಂಕರ್ ಸಿಂಗ್ ಎಂಬವರು ಪಕ್ಷವನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ‘ನಾನೇಕೆ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ?” ಎನ್ನುವ ಅವರ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕೇಂದ್ರದ ಮೋದಿ ಸರಕಾರದ ವೈಫಲ್ಯಗಳನ್ನು ಬರಹದಲ್ಲಿ ಬೆಟ್ಟು ಮಾಡಿರುವ ಅವರು, ಕೇಂದ್ರದ ವೈಫಲ್ಯಗಳನ್ನು ಸಮರ್ಥಿಸುವ, ನಕಲಿ ಸುದ್ದಿಗಳನ್ನು ಹಬ್ಬಿದರೂ ವಿಷಾದವೇ ಇಲ್ಲದ ‘ವರ್ಗ’ವೊಂದರ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಶಿವಂ ಶಂಕರ್ ಸಿಂಗ್ ಅವರ ಬರಹದ ಪೂರ್ಣ ಪಾಠ ಈ ಕೆಳಗಿದೆ.

ರಾಜಕೀಯ ಚರ್ಚೆಗಳು ನಮ್ಮ ದೇಶದಲ್ಲಿ, ಕೊನೇ ಪಕ್ಷ ನನ್ನ ಜೀವಿತಾವಧಿಯಲ್ಲಿ ತೀರಾ ಕೆಳಮಟ್ಟಕ್ಕೆ ಇಳಿದಿದೆ. ನಮ್ಮ ಪಕ್ಷನಿಷ್ಠೆ ನಂಬಲಸಾಧ್ಯ. ಎಷ್ಟೇ ಪುರಾವೆಗಳಿದ್ದರೂ, ಜನ ತಮ್ಮ ಪಕ್ಷವನ್ನೇ ಬೆಂಬಲಿಸುವುದು ಮುಂದುವರಿಸುತ್ತಾರೆ. ಅವರು ನಕಲಿ ಸುದ್ದಿಗಳನ್ನು ಹಬ್ಬಿಸಿದರೂ ಯಾವ ವಿಷಾದವೂ ಇರುವುದಿಲ್ಲ. ಪಕ್ಷಗಳು, ಮತದಾರರು ಹಾಗೂ ಬೆಂಬಲಿಗರು ಎಲ್ಲರೂ ಇದಕ್ಕೆ ಹೊಣೆ.

ಕೆಲ ನಿರ್ದಿಷ್ಟ ಸಂದೇಶಗಳನ್ನು ಹರಡುವ ಮೂಲಕ ನಂಬಲಸಾಧ್ಯ ಎನಿಸುವಷ್ಟು ಪರಿಣಾಮಕಾರಿ ಪ್ರಚಾರ ಮಾಡುವಲ್ಲಿ ಬಿಜೆಪಿ ಅದ್ಭುತ ಕಾರ್ಯ ಮಾಡಿದೆ. ನಾನು ಪಕ್ಷದಲ್ಲಿ ಮುಂದುವರಿಯದಿರುವ ನಿರ್ಧಾರ ಕೈಗೊಳ್ಳಲು ಬಹುಶಃ ಇದೇ ಸಂದೇಶಗಳು ಕಾರಣ. ಆದರೆ ಅದರ ವಿವರಣೆಗೆ ಬರುವ ಮುನ್ನ ಯಾವ ಪಕ್ಷವೂ ಸಂಪೂರ್ಣ ಕೆಟ್ಟದಲ್ಲ ಎಂದು ಪ್ರತಿಯೊಬ್ಬರಿಗೂ ಮನವರಿಕೆ ಮಾಡಲು ಇಚ್ಛಿಸುತ್ತೇನೆ. ಅಂತೆಯೇ ಯಾವ ಪಕ್ಷವೂ ಸಂಪೂರ್ಣ ಒಳ್ಳೆಯದಲ್ಲ. ಎಲ್ಲ ಸರ್ಕಾರಗಳೂ ಕೆಲ ಒಳ್ಳೆಯ ಕೆಲಸಗಳನ್ನು ಮಾಡಿವೆ ಹಾಗೂ ಕೆಲ ರಂಗಗಳಲ್ಲಿ ವಿಫಲವಾಗಿವೆ. ಈ ಸರ್ಕಾರ ಕೂಡಾ ಭಿನ್ನವೇನಲ್ಲ.

ಉತ್ತಮ ಕಾರ್ಯಗಳು

1. ರಸ್ತೆ ನಿರ್ಮಾಣ ಕಾರ್ಯ ಹಿಂದಿಗಿಂತ ಹೆಚ್ಚು ತ್ವರಿತವಾಗಿದೆ. ರಸ್ತೆಯ ಉದ್ದವನ್ನು ಲೆಕ್ಕಹಾಕುವ ವಿಧಾನದಲ್ಲಿ ಬದಲಾವಣೆ ಆಗಿದೆ. ಈ ಅಂಶದ ಹೊರತಾಗಿಯೂ ರಸ್ತೆ ನಿರ್ಮಾಣ ವೇಗವಾದಂತಿದೆ.

2. ವಿದ್ಯುತ್ ಸಂಪರ್ಕ ಹೆಚ್ಚಳ: ಎಲ್ಲ ಗ್ರಾಮಗಳೂ ವಿದ್ಯುತ್ ಸಂಪರ್ಕ ಪಡೆದಿವೆ ಹಾಗೂ ಜನ ದಿನದ ಹೆಚ್ಚಿನ ಅವಧಿಯಲ್ಲಿ ವಿದ್ಯುತ್ ಹೊಂದಿರುತ್ತಾರೆ. (ಹಿಂದಿನ ಕಾಂಗ್ರೆಸ್ ಸರ್ಕಾರ ಐದು ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿತ್ತು. ಮೋದಿ ಕೊನೆಯ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಈ ಕಾರ್ಯವನ್ನು ಪೂರ್ಣಗೊಳಿಸಿದರು. ಈ ಸಾಧನೆಯನ್ನು ನೀವು ನಿಮಗೆ ಬೇಕಾದಂತೆ ಮೌಲ್ಯಮಾಪನ ಮಾಡಬಹುದು. ಅಂತೆಯೇ ಸ್ವಾತಂತ್ರ್ಯದಿಂದೀಚೆಗೆ ವರ್ಷದಿಂದ ವರ್ಷಕ್ಕೆ ಜನ ವಿದ್ಯುತ್ ಪಡೆಯುವ ಅವಧಿ ಹೆಚ್ಚಳವಾಗುತ್ತಲೇ ಇದೆ. ಆದರೆ ಬಿಜೆಪಿ ಅವಧಿಯಲ್ಲಿ ಇದು ಹೆಚ್ಚಿನ ವೇಗ ಪಡೆದಿದೆ).

3. ಮೇಲ್ಮಟ್ಟದ ಭ್ರಷ್ಟಾಚಾರ ಇಳಿಕೆ: ಸಚಿವಾಲಯ ಮಟ್ಟದಲ್ಲಿ ಯಾವುದೇ ದೊಡ್ಡ ಭ್ರಷ್ಟಾಚಾರ ಪ್ರಕರಣಗಳು ಇದುವರೆಗೆ ವರದಿಯಾಗಿಲ್ಲ. (ಆದರೆ ಯುಪಿಎ-1 ಅವಧಿಯಲ್ಲೂ ಇದೇ ಸ್ಥಿತಿ ಇತ್ತು). ಕೆಳಹಂತದ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಬದಲಾಗಿ ಮೊತ್ತ ಹೆಚ್ಚಳವಾಗಿದೆ. ಯಾರು ಕೂಡಾ ಠಾಣೆದಾರ್, ಪಟ್ವಾರಿ ಪದ್ಧತಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

4. ಸ್ವಚ್ಛಭಾರತ್ ಮಿಷನ್ ಖಂಡಿತವಾಗಿಯೂ ಯಶಸ್ಸು: ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಸ್ವಚ್ಛತೆಯ ಅಗತ್ಯತೆ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿದೆ.

5. ಉಜ್ವಲ ಶ್ರೇಷ್ಠ ಯೋಜನೆ: ಎಷ್ಟು ಮಂದಿ ಎರಡನೇ ಸಿಲಿಂಡರ್ ಪಡೆದಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮೊದಲ ಸಿಲಿಂಡರ್ ಹಾಗೂ ಸ್ಟವ್ ಉಚಿತ. ಆದರೆ ಈಗ ಜನ ಅದಕ್ಕೆ ಪಾವತಿಸಬೇಕಾಗುತ್ತದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಂಡರ್ ವೆಚ್ಚ ದುಪ್ಪಟ್ಟಾಗಿದೆ. ಇದೀಗ ಸಿಲಿಂಡರ್ ವೆಚ್ಚ 800 ರೂಪಾಯಿಗಿಂತ ಅಧಿಕ ಇದೆ.

6. ಈಶಾನ್ಯಕ್ಕೆ ಸಂಪರ್ಕ ನಿಸ್ಸಂದೇಹವಾಗಿ ಹೆಚ್ಚಿದೆ: ಹೆಚ್ಚಿನ ಸಂಖ್ಯೆಯ ರೈಲುಗಳು, ರಸ್ತೆಗಳು, ವಿಮಾನಗಳು ಆರಂಭವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರದೇಶವನ್ನು ಇದೀಗ ಮುಖ್ಯವಾಹಿನಿಯ ಸುದ್ದಿವಾಹಿನಿಗಳಲ್ಲಿ ಚರ್ಚಿಸಲಾಗುತ್ತಿದೆ.

7. ಪ್ರಾದೇಶಿಕ ಪಕ್ಷಗಳ ಅಧೀನದಲ್ಲಿದ್ದ ಅವಧಿಗಿಂತ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಖಂಡಿತವಾಗಿಯೂ ಸುಧಾರಿಸಿದೆ.

ನಿಮಗೆ ಒಳ್ಳೆಯ ಸಾಧನೆ ಎನಿಸಿದ ಯಾವುದನ್ನು ಕೂಡಾ ನೀವು ಮುಕ್ತವಾಗಿ ಈ ಕೆಳಗೆ ಸೇರಿಸಲು ಅವಕಾಶವಿದೆ.

ಕೆಟ್ಟದ್ದೇನು?

ವ್ಯವಸ್ಥೆ ಹಾಗೂ ದೇಶವನ್ನು ಕಟ್ಟಲು ದಶಕಗಳು, ಶತಮಾನಗಳು ಬೇಕಾಗಿವೆ. ಆದರೆ ಬಿಜೆಪಿ ಅವಧಿಯಲ್ಲಿ ನಾನು ಕಂಡುಕೊಂಡ ಅತಿದೊಡ್ಡ ವೈಫಲ್ಯವೆಂದರೆ, ಕೆಲ ಶ್ರೇಷ್ಠ ಅಂಶಗಳನ್ನು ನಾಶಪಡಿಸಿದ್ದು.

1. ಚುನಾವಣಾ ಬಾಂಡ್: ಇದು ಮೂಲಭೂತವಾಗಿ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುತ್ತದೆ ಹಾಗೂ ಕಾರ್ಪೊರೇಟ್ ಕಂಪನಿಗಳು ಮತ್ತು ವಿದೇಶಿ ಶಕ್ತಿಗಳು ನಮ್ಮ ರಾಜಕೀಯ ಪಕ್ಷಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ನೀವು ನಿರ್ದಿಷ್ಟ ನೀತಿಯನ್ನು ರೂಪಿಸುವುದಾದರೆ 1000 ಕೋಟಿ ರೂಪಾಯಿ ಚುನಾವಣಾ ಬಾಂಡ್ ನೀಡುತ್ತೇವೆ ಎಂದು ಕಾರ್ಪೊರೇಟ್ ಕಂಪನಿಗಳು ಆಶ್ವಾಸನೆ ನೀಡಲು ಇದು ಅವಕಾಶ ಮಾಡಿಕೊಟ್ಟಿದೆ. ಏಕೆಂದರೆ ಈ ಬಾಂಡ್‍ಗಳು ಅನಾಮಧೇಯವಾಗಿರುತ್ತವೆ. ಈ ಬಗ್ಗೆ ಯಾವ ವಿಚಾರಣೆಯೂ ಇಲ್ಲ. ಈ ಅನಾಮಧೇಯ ಸಾಧನವನ್ನು ಪತ್ತೆ ಮಾಡಲು ಯಾವ ವ್ಯವಸ್ಥೆಯೂ ಇಲ್ಲ. ಇದು ಸಚಿವ ಮಟ್ಟದಲ್ಲಿ ಹೇಗೆ ಭ್ರಷ್ಟಾಚಾರ ಇಳಿಕೆಗೆ ಕಾರಣವಾಗಿದೆ ಎನ್ನುವುದನ್ನೂ ವಿವರಿಸುತ್ತದೆ. ಇದು ಕೇವಲ ಕಡತ ಅಥವಾ ಆದೇಶದ ಹಂತದಲ್ಲಲ್ಲ. ನೀತಿಯ ಹಂತದಲ್ಲೇ ಆಗುತ್ತದೆ.

2.ಯೋಜನಾ ಆಯೋಗದ ವರದಿಗಳು: ಇದು ಎಲ್ಲ ಅಂಕಿ ಅಂಶಗಳ ಮೂಲವಾಗಿತ್ತು. ಇವು ಸರ್ಕಾರಿ ಯೋಜನೆಗಳ ಪರಿಶೋಧನೆ ಮಾಡುತ್ತಿದ್ದವು ಹಾಗೂ ಇವು ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ವಿವರಿಸುತ್ತಿದ್ದವು. ಆದರೆ ಈ ವ್ಯವಸ್ಥೆಗೆ ಇತಿಶ್ರೀ ಹಾಡಲಾಗಿದ್ದು, ಸರ್ಕಾರ ನೀಡಿದ ಅಂಕಿ ಅಂಶಗಳನ್ನು ನೀವು ನಂಬಲೇಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ (ಸಿಎಜಿ ಪರಿಶೋಧನಾ ವರದಿ ತೀರಾ ವಿಳಂಬವಾಗಿ ಪ್ರಕಟವಾಗುತ್ತದೆ). ನೀತಿ ಆಯೋಗಕ್ಕೆ ಈ ಬದ್ಧತೆ ಇಲ್ಲ. ಇದು ಮೂಲಭೂತವಾಗಿ ಚಿಂತಕರ ಕೂಟ ಹಾಗೂ ಸಾರ್ವಜನಿಕ ಸಂಪರ್ಕ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ. ಯೋಜನಾ ಆಯೋಗವನ್ನು ಕಿತ್ತುಹಾಕದೇ ಯೋಜನೆ/ ಯೋಜನೇತರ ಭಿನ್ನತೆಯನ್ನು ಕಿತ್ತುಹಾಕಬಹುದಿತ್ತು.

3. ಸಿಬಿಐ ಮತ್ತು ಇಡಿ ದುರ್ಬಳಕೆ: ನಾನು ನೋಡಿದಾಗಿನಿಂದಲೂ ಇದನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಅದಲ್ಲದಿದ್ದರೂ, ಮೋದಿ/ ಶಾ ಸಂಬಂಧ ನಿಜವನ್ನು ಯಾರು ಹೇಳಿದರೂ, ಅವರ ವಿರುದ್ಧ ಈ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾದ ಭಿನ್ನಮತವನ್ನು ಹತ್ತಿಕ್ಕಲು ಇದು ಸಾಕು.

4. ನೋಟು ಅಮಾನ್ಯ: ಇದು ವಿಫಲವಾಗಿದೆ. ಆದರೆ ಅದಕ್ಕಿಂತಲೂ ಕೆಟ್ಟ ಅಂಶವೆಂದರೆ ಈ ವೈಫಲ್ಯವನ್ನು ಸ್ವೀಕರಿಸಲು ಬಿಜೆಪಿ ಅಸಮರ್ಥವಾಗಿರುವುದು. ಇದು ಉಗ್ರರಿಗೆ ಹಣ ನೀಡುವುದನ್ನು ಕಡಿತಗೊಳಿಸುತ್ತದೆ, ನಗದು ಕಡಿಮೆ ಮಾಡುತ್ತದೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ ಎಂಬ ಎಲ್ಲ ಪ್ರಚಾರಗಳೂ ಸುಳ್ಳಾಗಿವೆ. ಇದು ವಹಿವಾಟನ್ನು ಅಕ್ಷರಶಃ ನಾಶಪಡಿಸಿದೆ.

5. ಜಿಎಸ್‍ಟಿ ಅನುಷ್ಠಾನ: ಇದನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಿದ್ದರಿಂದ ವ್ಯಾಪಾರಕ್ಕೆ ತೀರಾ ಹಾನಿಯಾಗಿದೆ. ಸಂಕೀರ್ಣ ಸಂರಚನೆ, ವಿಭಿನ್ನ ವಸ್ತುಗಳ ಮೇಲೆ ಭಿನ್ನ ದರ, ಸಲ್ಲಿಕೆಯ ಸಂಕೀರ್ಣತೆಗಳು. ಬಹುಶಃ ಇದು ಸ್ಥಿರತೆಯ ಹಂತಕ್ಕೆ ಬರಬಹುದು. ಆದರೆ ಅದು ಹಾನಿಯನ್ನಂತೂ ಮಾಡಿದೆ. ಇದನ್ನು ಒಪ್ಪಿಕೊಳ್ಳದಿರುವುದು ಕೂಡಾ ಬಿಜೆಪಿಯ ಧಾಷ್ಟ್ರ್ಯವನ್ನು ತೋರಿಸುತ್ತದೆ.

6. ವಿದೇಶಾಂಗ ನೀತಿ ವಿಫಲ: ಶ್ರೀಲಂಕಾದಲ್ಲಿ ಚೀನಾಗೆ ಬಂದರು ಇದೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಮೇಲೆ ತೀವ್ರ  ಆಸಕ್ತಿಯನ್ನು ಅದು ಹೊಂದಿದೆ. ಭಾರತವನ್ನು ಇದು ಸುತ್ತುವರಿದಿದೆ. ಮಾಲ್ಡೀವ್ಸ್‍ನ ವೈಫಲ್ಯ (ಭಾರತದ ವಿದೇಶಾಂಗ ನೀತಿ ಪತನದಿಂದಾಗಿ ಭಾರತೀಯ ಕಾರ್ಮಿಕರು ವೀಸಾಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ). ವಿದೇಶಗಳಿಗೆ ಪದೇ ಪದೇ ಭೇಟಿ ನೀಡುವ ಮೋದಿಯವರು, 2014ಕ್ಕಿಂತ ಮೊದಲು ಭಾರತಕ್ಕೆ ಯಾವ ಗೌರವವೂ ಇರಲಿಲ್ಲ ಎಂದು ಸಾರುತ್ತಿದ್ದಾರೆ. ಇದೀಗ ಶ್ರೇಷ್ಠ ಗೌರವ ಸಂದಿದೆ ಎಂದು ಹೇಳುತ್ತಿದ್ದಾರೆ. (ಇದು ಅರ್ಥಹೀನ. ಭಾರತಕ್ಕೆ ಗೌರವ ಬಂದಿರುವುದು ಆರ್ಥಿಕ ಪ್ರಗತಿ ಮತ್ತು ಐಟಿ ವಲಯದ ಕಾರಣದಿಂದ. ಇದು ಮೋದಿಯ ಕಾರಣದಿಂದ ಹೆಚ್ಚಿದ್ದಲ್ಲ. ಗೋಮಾಂಸ ಆಧರಿತ ಹತ್ಯೆಗಳು, ಪತ್ರಕರ್ತರಿಗೆ ಬೆದರಿಕೆಯಂಥ ಘಟನೆಗಳಿಂದ ಇದು ಕುಸಿದಿರಬಹುದು).

7. ಯೋಜನೆಗಳ ವೈಫಲ್ಯ: ಸಂಸದರ ಆದರ್ಶ ಗ್ರಾಮ ಯೋಜನೆ, ಮೇಕ್ ಇನ್ ಇಂಡಿಯಾ, ಕೌಶಲ ಅಭಿವೃದ್ಧಿ, ಫಸಲು ವಿಮೆ (ಸರ್ಕಾರ ವಿಮಾ ಕಂಪನಿಗಳ ಹಿಡಿತದಲ್ಲಿ ಸಿಲುಕಿದೆ)ಗಳ ವೈಫಲ್ಯವನ್ನು ಸರಿಪಡಿಸುವ ಕಾರ್ಯವೂ ಆಗಿಲ್ಲ. ನಿರುದ್ಯೋಗ ಸಮಸ್ಯೆಯನ್ನು ಮತ್ತು ರೈತರ ಸಮಸ್ಯೆಯನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಪ್ರತಿ ವಿಚಾರವನ್ನೂ ವಿರೋಧ ಪಕ್ಷಗಳ ತಂತ್ರಗಾರಿಕೆ ಎಂದು ಬಣ್ಣಿಸುತ್ತಿದೆ.

8.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ: ಮೋದಿ ಮತ್ತು ಎಲ್ಲ ಬಿಜೆಪಿ ಸಚಿವರು ಮತ್ತು ಬೆಂಬಲಿಗರು ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಈ ವಿಚಾರಕ್ಕೆ ಕಟುವಾಗಿ ಟೀಕಿಸಿದ್ದರು. ಆದರೆ ಇದೀಗ ಅಧಿಕ ಬೆಲೆಯನ್ನು ತಾವೇ ಸಮರ್ಥಿಸಿಕೊಳ್ಳುತ್ತಿದ್ದು, ಆಗ ಕಚ್ಚಾ ತೈಲ ಅಗ್ಗವಾಗಿತ್ತು ಎಂದು ಹೇಳಿಕೊಳ್ಳುತ್ತಿವೆ. ಇದು ಸ್ವೀಕಾರಾರ್ಹವಲ್ಲ.

9. ಮೂಲ ಸಮಸ್ಯೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ವಿಫಲ: ಶಿಕ್ಷಣ ಮತ್ತು ಆರೋಗ್ಯ. ಶಿಕ್ಷಣ ಕ್ಷೇತ್ರದಲ್ಲಿ ಏನೂ ಆಗಿಲ್ಲದಿರುವುದು ದೇಶದ ಅತಿದೊಡ್ಡ ವೈಫಲ್ಯ. ಸರ್ಕಾರಿ ಶಾಲೆಗಳ ಗುಣಮಟ್ಟ ಕಳೆದ ದಶಕಗಳಿಂದ ಕುಸಿಯುತ್ತಲೇ ಇದೆ (ಎಎಸ್‍ಇಆರ್ ವರದಿಗಳು) ಮತ್ತು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆಯುಷ್ಮಾನ್ ಭಾರತ ಯೋಜನೆ ಘೋಷಣೆ ಹೊರತಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಏನೂ ಮಾಡಿಲ್ಲ.  ಇದು ಯಾವ ಪ್ರಯೋಜನವನ್ನೂ ನೀಡಿಲ್ಲ. ವಿಮಾ ಯೋಜನೆಗಳ ಇತಿಹಾಸ ಅತ್ಯಂತ ಕರಾಳ ಹಾಗೂ ಅಮೆರಿಕದ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಮಾರಕ. (ಮೈಕೆಲ್ ಮೋರ್ ಅವರ ಸಿಕೋ ವೀಕ್ಷಿಸಿ).

ನಿಮ್ಮ ಅರ್ಥೈಸುವಿಕೆಗೆ ಅನುಗುಣವಾಗಿ ನೀವು ಕೂಡುವುದು ಹಾಗೂ ಕಳೆಯುವ ಲೆಕ್ಕಾಚಾರ ಮಾಡಬಹುದು. ಆದರೆ ಇದು ನನ್ನ ಮೌಲ್ಯಮಾಪನ. ಚುನಾವಣಾ ಬಾಂಡ್ ವಿಚಾರ ದೊಡ್ಡದು ಹಾಗೂ ಬಹುಶಃ ಸುಪ್ರೀಂಕೋರ್ಟ್ ಇದನ್ನು ತಳ್ಳಿಹಾಕಬಹುದು. ಪ್ರತಿ ಸರ್ಕಾರವೂ ಕೆಲ ವೈಫಲ್ಯ ಮತ್ತು ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಆದರೆ ನನ್ನ ಪ್ರಕಾರ ಅತಿದೊಡ್ಡ ಸಮಸ್ಯೆ ಎಂದರೆ ಎಲ್ಲಕ್ಕಿಂತ ಹೆಚ್ಚಾಗಿ ನೈತಿಕತೆ.

ನಿಕೃಷ್ಟ

ಈ ಸರ್ಕಾರದ ನೈಜ ಋಣಾತ್ಮಕ ಅಂಶವೆಂದರೆ, ಇದು ಪೂರ್ವಯೋಜಿತ ಕಾರ್ಯತಂತ್ರದ ಮೂಲಕ ದೇಶದ ಚಿತ್ರಣದ ಮೇಲೆ ಹೇಗೆ ಪರಿಣಾಮ ಬೀರಿದೆ ಎನ್ನುವುದು. ಇದು ವೈಫಲ್ಯವಲ್ಲ. ಯೋಜಿತ.

1. ಇದು ಮಾಧ್ಯಮದ ಗೌರವ ಕಳೆದಿದೆ.

ಪ್ರತಿಯೊಂದು ಟೀಕೆಗಳನ್ನು ಕೂಡಾ ‘ಬಿಜೆಪಿಯಿಂದ ಪಾವತಿಸದ ಕಾರಣ ಹೀಗೆ ಬರೆದಿದ್ದಾರೆ’ ಎಂಬಂತೆ ಅಥವಾ ಕಾಂಗ್ರೆಸ್‍ನಿಂದ ವೇತನ ಪಡೆಯುತ್ತಿದ್ದಾರೆ ಎಂಬಂತೆ ಟೀಕಿಸಲಾಗುತ್ತಿದೆ. ಆದರೆ ಹಲವು ಮಂದಿ ಪತ್ರಕರ್ತರ ಬಗ್ಗೆ ಇದು ನಿಜವಲ್ಲ ಎನ್ನುವುದು ನನಗೆ ಗೊತ್ತು. ಆದರೆ ಗಮನಿಸಬೇಕಾದ ಅಂಶವೆಂದರೆ, ಯಾರೂ ಈ ಸಮಸ್ಯೆಯನ್ನು ಅಥವಾ ದೂರನ್ನು ಪರಿಹರಿಸಲು ಮುಂದಾಗಿಲ್ಲ. ಅವರು ವಿಷಯ ಎತ್ತಿದ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಾರೆಯೇ ವಿನಃ ವಿಷಯವನ್ನು ಮರೆತು ಬಿಡುತ್ತಾರೆ.

2. ಕಳೆದ 70 ವರ್ಷಗಳಲ್ಲಿ ಭಾರತದಲ್ಲಿ ಏನೂ ನಡೆದಿಲ್ಲ ಎಂದು ಬಿಂಬಿಸಿರುವುದು:

ಇದು ಖಂಡಿತಾ ತಪ್ಪು. ಈ ಮನೋಭಾವವೇ ದೇಶಕ್ಕೆ ಮಾರಕ. ಈ ಸರ್ಕಾರ 4,000 ಕೋಟಿ ರೂಪಾಯಿ ನಮ್ಮ ತೆರಿಗೆ ಹಣವನ್ನು ಜಾಹೀರಾತಿನ ಮೇಲೆ ಸುರಿದಿದೆ. ಇದು ಈಗ ಪ್ರವೃತ್ತಿಯಾಗಿ ಬೆಳೆಯುತ್ತಿದೆ. ಸಣ್ಣ ಕೆಲಸ ಮಾಡಿ ದೊಡ್ಡ ಬ್ರ್ಯಾಂಡಿಂಗ್ ಮಾಡುವ ಕೆಲಸ ನಡೆಯುತ್ತಿದೆ. ರಸ್ತೆ ನಿರ್ಮಿಸಿದವರಲ್ಲಿ ಮೋದಿಯೇ ಮೊದಲಿಗರಲ್ಲ. ನಾನು ಸಂಚರಿಸಿದ ಕೆಲ ರಸ್ತೆಗಳು ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಅವರ ಯೋಜನೆಗಳು. 1990ರ ದಶಕದಿಂದಲೂ ಭಾರತ ಐಟಿ ಶಕ್ತಿಕೇಂದ್ರವಾಗಿದೆ. ಇಂದಿನ ಸನ್ನಿವೇಶದಲ್ಲಿ ಹಿಂದಿನ ಸಾಧನೆಗಳನ್ನು ಮತ್ತು ನಾಯಕರನ್ನು ಅಳೆಯುವುದು ಸುಲಭ. "ಉದಾಹರಣೆಗೆ ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏಕೆ ಶೌಚಾಲಯಗಳನ್ನು ನಿರ್ಮಿಸಲಿಲ್ಲ?, ಅಂತಹ ಮೂಲಸೌಕರ್ಯವನ್ನೂ ಅವರು ಒದಗಿಸಲಿಲ್ಲ" ಇದು ತಾರ್ಕಿಕ ಎನಿಸಿ, ನಾನು ಭಾರತದ ಇತಿಹಾಸವನ್ನು ಓದುವವರೆಗೆ ನಾನು ಕೂಡಾ ನಂಬಿದ್ದೆ. ನಾವು 1947ರಲ್ಲಿ ಸ್ವಾತಂತ್ರ್ಯ ಪಡೆದಾಗ, ನಾವು ತೀರಾ ಬಡದೇಶವಾಗಿದ್ದೆವು. ಮೂಲಸೌಕರ್ಯಗಳಿಗೂ ನಮ್ಮಲ್ಲಿ ಹಣ ಅಥವಾ ಬಂಡವಾಳ ಇರಲಿಲ್ಲ. ಇದನ್ನು ಎದುರಿಸಲು ನೆಹರೂ ಸಮಾಜವಾದದ ಮಾರ್ಗವನ್ನು ಹಿಡಿದು ಸಾರ್ವಜನಿಕ ಉದ್ದಿಮೆಗಳನ್ನು ಬೆಳೆಸಿದರು. ಉಕ್ಕು ನಿರ್ಮಿಸುವ ಸಾಮರ್ಥ್ಯ ನಮ್ಮಲ್ಲಿ ಇರಲಿಲ್ಲ. ರಷ್ಯನ್ನರ ನೆರವಿನಿಂದ ಹೆವಿ ಎಂಜಿನಿಯರಿಂಗ್ ಕಾರ್ಪೊರೇಷನ್ ರಾಂಚಿಯಲ್ಲಿ ನಿರ್ಮಾಣವಾಯಿತು. ಭಾರತದಲ್ಲಿ ಉಕ್ಕು ನಿರ್ಮಿಸುವ ಯಂತ್ರಗಳು ಬೆಳೆದವು. ಇದಲ್ಲದಿದ್ದರೆ, ನಮಗೆ ಇಂದು ಉಕ್ಕು ಇರುತ್ತಿರಲಿಲ್ಲ. ಪರಿಣಾಮವಾಗಿ ಮೂಲಸೌಕರ್ಯಗಳು ಕೂಡಾ. ಭಾರತದ ಕಾರ್ಯಸೂಚಿ ಮೂಲ ಕೈಗಾರಿಕೆಗಳು ಮತ್ತು ಮೂಲಸೌಕರ್ಯವಾಗಿತ್ತು. ಪದೇ ಪದೇ ಬರಗಾಲಗಳು ಎದುರಾದವು. ಪ್ರತಿ 2-3 ವರ್ಷಗಳಿಗೊಮ್ಮೆ ದೊಡ್ಡ ಸಂಖ್ಯೆಯಲ್ಲಿ ಜನ ಹಸಿವಿನಿಂದ ಸತ್ತರು. ಆದ್ಯತೆ ಜನರ ಹೊಟ್ಟೆ ತುಂಬಿಸುವುದಾಗಿತ್ತು. ಶೌಚಾಲಯ ಆಗ ವಿಲಾಸಿ ಎನಿಸಿಕೊಂಡಿತ್ತು. ಹಸಿರು ಕ್ರಾಂತಿಯಿಂದಾಗಿ 1990ರ ದಶಕದಲ್ಲಿ ಆಹಾರದ ಕೊರತೆ ನಿವಾರಣೆಯಾಯಿತು. ಇದೀಗ ನಾವು ಹೆಚ್ಚುವರಿ ಬೆಳೆಯ ಸಮಸ್ಯೆ ಎದುರಿಸುತ್ತಿದ್ದೇವೆ. ಶೌಚಾಲಯ ಸಮಸ್ಯೆಯ ವಿಚಾರ, ಇಂದಿನಿಂದ 25 ವರ್ಷಗಳ ಬಳಿಕ ಜನ ಮೋದಿ ಇಡೀ ಭಾರತವನ್ನು ಏಕೆ ಹವಾನಿಯಂತ್ರಿತ ದೇಶವಾಗಿ ಮಾಡಲಿಲ್ಲ ಎಂದು ಪ್ರಶ್ನಿಸುವಂತಿದೆ. ಇಂದು ವಿಲಾಸಿ ಎನಿಸುವ ಸೌಲಭ್ಯಗಳು, ಕೆಲ ಹಂತದಲ್ಲಿ ಶೌಚಾಲಯಕ್ಕೂ ಇದು ಅನ್ವಯಿಸುತ್ತಿತ್ತು. 10-15 ವರ್ಷಗಳಿಂದ ಇದು ಆಗಬಹುದು. ಆದರೆ 70 ವರ್ಷ ಎನ್ನುವುದು ಖಂಡಿತವಾಗಿಯೂ ಸುಳ್ಳು.

3. ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ನಂಬಿಸುವುದು:

ಸುಳ್ಳುಸುದ್ದಿಗಳಲ್ಲಿ ಕೆಲ ಬಿಜೆಪಿ ವಿರೋಧಿ ಸುದ್ದಿಗಳೂ ಇವೆ. ಆದರೆ ಬಿಜೆಪಿ ಪರ ಹಾಗೂ ವಿರೋಧ ಪಕ್ಷಗಳಿಗೆ ವಿರುದ್ಧವಾದ ಸುದ್ದಿಗಳು ಬೇಗ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪುತ್ತಿವೆ. ಈ ಬೆಂಬಲಿಗರಲ್ಲಿ ಕೆಲವರು, ಪಕ್ಷದವರೇ ಆಗಿದ್ದಾರೆ. ಇದು ದ್ವೇಷಪೂರ್ವಕ ಹಾಗೂ ಧ್ರುವೀಕರಣದ ಸುದ್ದಿಗಳು. ಇದು ಮತ್ತಷ್ಟು ಕೆಟ್ಟದಕ್ಕೆ ಕಾರಣವಾಗುತ್ತವೆ. ಸರ್ಕಾರಿ ಪ್ರಾಯೋಜಿತ ಆನ್‍ಲೈನ್ ಪೋರ್ಟೆಲ್‍ಗಳು ಸಮಾಜದಲ್ಲಿ ಭಾರಿ ಹಾನಿ ಉಂಟು ಮಾಡುತ್ತಿವೆ.

4. ಹಿಂದೂ ಖತ್ರೆ ಮೈನ್ ಹೆ:

ಹಿಂದೂಗಳು ಹಾಗೂ ಹಿಂದುತ್ವಕ್ಕೆ ಅಪಾಯ ಒದಗಿದೆ ಎಂದು ಜನರ ಮನಸ್ಸಿನಲ್ಲಿ ಬಿತ್ತಲಾಗುತ್ತಿದೆ. ನಮ್ಮನ್ನು ರಕ್ಷಿಸಿಕೊಳ್ಳಲು ಮೋದಿಯೊಬ್ಬರೇ ಆಯ್ಕೆ ಎಂಬ ವಾತಾವರಣ ಸೃಷ್ಟಿಸಲಾಗಿದೆ. ವಾಸ್ತವವಾಗಿ, ಈ ಸರ್ಕಾರ ಬರುವ ಮೊದಲು ಇದ್ದ ಸ್ಥಿತಿಗತಿಯೇ ಹಿಂದೂಗಳಿಗೆ ಇದೆ. ಜನರ ಮನೋಪ್ರವೃತ್ತಿಯ ಹೊರತಾಗಿ ಯಾವ ಬದಲಾವಣೆಯೂ ಆಗಿಲ್ಲ. 2007ರಲ್ಲಿ ಹಿಂದೂಗಳಿಗೆ ಅಪಾಯ ಇತ್ತೇ?, ಪ್ರತಿ ದಿನವೂ ನಾನು ಇದನ್ನು ಕೇಳಿದ ನೆನಪು ನನಗಿಲ್ಲ. ಹಿಂದೂಗಳ ಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಆದರೆ ಭೀತಿ ಮತ್ತು ದ್ವೇಷವನ್ನು ಹರಡಲಾಗುತ್ತಿದೆ.

5. ಸರ್ಕಾರದ ವಿರುದ್ಧ ಮಾತನಾಡಿದರೆ ನೀವು ದೇಶದ್ರೋಹಿಗಳು ಇತ್ತೀಚೆಗೆ ಹಿಂದೂವಿರೋಧಿಗಳು:

ಸರ್ಕಾರದ ವಿರುದ್ಧ ಕಾನೂನುಸಮ್ಮತ ಟೀಕೆಗಳನ್ನು ಕೂಡಾ ಹೀಗೆ ಬಾಯಿ ಮುಚ್ಚಿಸಲಾಗುತ್ತಿದೆ. ನಿಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಲು, ಎಲ್ಲೆಡೆ ವಂದೇಮಾತರಂ ಹಾಡಬೇಕು (ಬಿಜೆಪಿ ನಾಯಕರಿಗೆ ಒಂದು ಶಬ್ದವೂ ಗೊತ್ತಿಲ್ಲದಿದ್ದರೂ, ಅದನ್ನು ಹಾಡುವಂತೆ ನಿಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ). ನಾನು ಹೆಮ್ಮೆಯ ರಾಷ್ಟ್ರೀಯವಾದಿ ಹಾಗೂ ನನ್ನ ರಾಷ್ಟ್ರೀಯತೆ ಬೇರೆಯವರ ಮೇಲೆ ಪ್ರದರ್ಶನಕ್ಕಾಗಿ ಅದನ್ನು ಹೇರಲು ಅವಕಾಶ ನೀಡುತ್ತಿಲ್ಲ. ನಾನು ರಾಷ್ಟ್ರಗೀತೆ ಹಾಡುತ್ತೇನೆ ಹಾಗೂ ಅಗತ್ಯ ಬಿದ್ದಾಗಲೆಲ್ಲ ಅದನ್ನು ಹೆಮ್ಮೆಯಿಂದ ಹಾಡುತ್ತೇನೆ. ಆ ಭಾವನೆ ಬಂದಾಗ ಯಾರು ಕೂಡಾ ಅದನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಹೇರಬೇಕು ಎಂದು ನಾನು ಬಯಸುವುದಿಲ್ಲ.

6. ಬಿಜೆಪಿ ಮುಖಂಡರಿಂದ ನಡೆಸಲ್ಪಡುವ ಎಲ್ಲ ಸುದ್ದಿವಾಹಿನಿಗಳ ಏಕೈಕ ಕೆಲಸವೆಂದರೆ, ಹಿಂದೂ ಮುಸ್ಲಿಂ ಚರ್ಚೆ ಹುಟ್ಟುಹಾಕುವುದು, ರಾಷ್ಟ್ರೀಯತೆ- ರಾಷ್ಟ್ರವಿರೋಧಿ, ಭಾರತ- ಪಾಕಿಸ್ತಾನದ ಬಗ್ಗೆ ಚರ್ಚಿಸುವುದು ಮತ್ತು ಭಾವನೆಗಳನ್ನು ಧ್ರುವೀಕರಿಸುವ ಸಲುವಾಗಿ ಸಮಸ್ಯೆಗಳನ್ನು ಕೆರಳಿಸುವುದು.

7. ಧ್ರುವೀಕರಣ:

ಅಭಿವೃದ್ಧಿಯ ಸಂದೇಶ ಈಗ ಇತಿಹಾಸ. ಮುಂದಿನ ಚುನಾವಣೆಗೆ ಬಿಜೆಪಿಯ ಕಾರ್ಯತಂತ್ರವೆಂದರೆ, ಧ್ರುವೀಕರಣ ಮತ್ತು ನಕಲಿ ರಾಷ್ಟ್ರೀಯತೆಯನ್ನು ಕೆರಳಿಸುವುದು. ಮೋದಿಯವರು ತಮ್ಮ ಭಾಷಣದಲ್ಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಜಿನ್ನಾ, ನೆಹರೂ ಅವರಂಥ ಕಾಂಗ್ರೆಸ್ ನಾಯಕರು ಭಗತ್ ಸಿಂಗ್ ಅವರನ್ನು ಜೈಲಿನಲ್ಲಿ ಭೇಟಿಯಾಗಿಲ್ಲ. (ಇದು ಪ್ರಧಾನಿಯವರೇ ಹಬ್ಬಿಸಿದ ಸುಳ್ಳುಸುದ್ದಿ.) ಆದರೆ ಗುಜರಾತ್‍ನಲ್ಲಿ ಮೋದಿಯನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಪಾಕಿಸ್ತಾನದ ನಾಯಕರನ್ನು ಭೇಟಿ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರು ತಮ್ಮ ಭಾಷಣದಲ್ಲಿ ಮಹಾರಾಣಾ ಪ್ರತಾಪ್ ಅವರು ಹೇಗೆ ಅಕ್ಬರ್‍ಗಿಂತ ಶ್ರೇಷ್ಠ ಎನ್ನುವುದನ್ನು ಹೇಳಿದ್ದಾರೆ.

ಜೆಎನ್‍ಯು ವಿದ್ಯಾರ್ಥಿಗಳು ರಾಷ್ಟ್ರವಿರೋಧಿಗಳಾಗಲು ಕಾರಣ ಅವರು ಭಾರತವನ್ನು ಚೂರು ಚೂರು ಮಾಡಲು ಹೊರಟಿರುವುದು. ಇದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಿದ ಅಪಪ್ರಚಾರ. ಧ್ರುವೀಕರಣ ಮತ್ತು ಚುನಾವಣೆ ಗೆಲ್ಲುವ ಸಲುವಾಗಿ ಇದನ್ನು ಹಬ್ಬಿಸಲಾಗಿದೆ. ನಮ್ಮ ನಾಯಕರು ಇದನ್ನು ಹೇಳುವಾಗ ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ನನಗೆ ಅನಿಸಿತ್ತು ಹಾಗೂ ರಾಜಕೀಯ ಲಾಭಕ್ಕಾಗಿ ದೇಶ ಉರಿಸಲು ಇಚ್ಛಿಸುವವರನ್ನು ನಾನು ತಿರಸ್ಕರಿಸುತ್ತೇನೆ.

ದೇಶದ ಚಿತ್ರಣವನ್ನು ಕಗ್ಗತ್ತಲಿಗೆ ಹೇಗೆ ಬಿಜೆಪಿ ತಳ್ಳುತ್ತಿದೆ ಎಂದು ಹೇಳಲು ಇವು ಕೆಲ ನಿರ್ದಶನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News