ಸಂಸದರ ನಿಧಿಯ ವಿವರಗಳನ್ನು ಜಾಲತಾಣದಲ್ಲಿ ಹಾಕುವಂತೆ ಮಾಹಿತಿ ಆಯೋಗ ಆದೇಶ

Update: 2018-06-18 17:08 GMT

ಹೊಸದಿಲ್ಲಿ, ಜೂ.18: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಎಂಪಿಎಲ್‌ಎಡಿಎಸ್) ನಡೆಸಲಾಗಿರುವ ಕೆಲಸಗಳ ಕುರಿತ ವಿವರಗಳನ್ನು ಜಾಲತಾಣದಲ್ಲಿ ಹಾಕುವಂತೆ ಸರಕಾರಕ್ಕೆ ಕೇಂದ್ರ ಮಾಹಿತಿ ಆಯೋಗ ನಿರ್ದೇಶ ನೀಡಿದೆ.

ಎಂಪಿಎಲ್‌ಎಡಿಎಸ್ ನಿಧಿಯನ್ನು ಬಿಡುಗಡೆ ಮಾಡುತ್ತೇವೆ. ಆದರೆ ಅದರಿಂದ ನಡೆಯುವ ಕಾಮಗಾರಿಯ ಬಗ್ಗೆ ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ಸಂಖ್ಯಾಶಾಸ್ತ್ರ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನೀಡಿದ ಹೇಳಿಕೆಯ ನಂತರ ಸಿಐಸಿ ಈ ಆದೇಶವನ್ನು ನೀಡಿದೆ. ಸಚಿವಾಲಯವು ಜಿಲ್ಲಾ ಪ್ರಾಧಿಕಾರದಿಂದ ನಿಧಿ ಉಪಯೋಗದ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿತ್ತೇ ಹೊರತು ಈ ಬಗ್ಗೆ ಯಾವುದೇ ದಾಖಲೆಗಳನ್ನು ಜಾಲತಾಣದಲ್ಲಿ ಹಾಕುತ್ತಿರಲಿಲ್ಲ ಎಂದು ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ತಿಳಿಸಿದ್ದಾರೆ. ಈ ಪ್ರಮಾಣ ಪತ್ರಗಳಲ್ಲಿ ನಿಜವಾಗಿ ನಡೆದ ಕಾಮಗಾರಿಯ ಬಗ್ಗೆ ವಿವರವಿದೆಯೇ ಎಂಬುದೂ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ಗ್ವಾಲಿಯರ್ ಲೋಕಸಭಾ ಕ್ಷೇತ್ರದ ಸಂಸದ ನರೇಂದ್ರ ಸಿಂಗ್ ತೋಮರ್ ಎಂಪಿಎಲ್‌ಎಡಿಎಸ್ ನಿಧಿಯನ್ನು ಬಳಸಿ ಮಾಡಿದ ಕಾಮಗಾರಿಯ ವಿವರವನ್ನು ಕೋರಿ ಪ್ರಶಾಂತ್ ಜೈನ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಮೂಲಕ ಈ ವಿಷಯ ಪ್ರಸ್ತಾಪಕ್ಕೆ ಬಂದಿದೆ. ತನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರತಿಯೊಬ್ಬ ಸಂಸದನಿಗೆ ಎಂಪಿಎಲ್‌ಎಡಿಎಸ್ ನಿಧಿಯಿಂದ ಪ್ರತೀ ಸಂಸದನಿಗೆ ವಾರ್ಷಿಕ ಐದು ಕೋಟಿ ರೂ. ನೀಡಲಾಗುತ್ತದೆ. ಜನವರಿ 2015ರಿಂದ ಆಗಸ್ಟ್ 2017ರವರೆಗೆ ಸಚಿವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ನೀಡಿದ ದೇಣಿಗೆ ಅಥವಾ ಮಾಡಿದ ವೆಚ್ಚಗಳ ಬಗ್ಗೆ ವಿವರಣೆಯನ್ನು ಕೋರಿ ಜೈನ್ ಅರ್ಜಿ ಸಲ್ಲಿಸಿದ್ದರು. ದೇಶದ ಪ್ರಜೆಯಾಗಿ ಸಂಸದರು ತಮಗೆ ನೀಡಲಾಗುವ ನಿಧಿಯನ್ನು ಯಾವ ರೀತಿ ಉಪಯೋಗಿಸುತ್ತಾರೆ ಎಂಬುದನ್ನು ತಿಳಿಯುವ ಹಕ್ಕು ನನಗಿದೆ ಎಂದು ಜೈನ್ ತಿಳಿಸಿದ್ದರು. ಪ್ರತೀ ಸಂಸದರ, ಪ್ರತಿ ಲೋಕಸಭಾ ಕ್ಷೇತ್ರದ ಹಾಗೂ ಪ್ರತೀ ಕೆಲಸದ ಸಂಪೂರ್ಣ ವಿವರವನ್ನು ಜಿಲ್ಲಾಡಳಿತದಿಂದ ಪಡೆದು ಅದನ್ನು ಸ್ಥಳೀಯಾಡಳಿತ ಮತ್ತು ಸಚಿವಾಲಯದ ಜಾಲತಾಣದಲ್ಲಿ ಹಾಕುವಂತೆ ಆಚಾರ್ಯುಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News