ಶ್ರೀಮಂತರೂ ದುರಾಸೆಯಿಂದ ಹೊರತಾಗಿಲ್ಲ: ನ್ಯಾಯಾಲಯ

Update: 2018-06-18 16:47 GMT

ಹೊಸದಿಲ್ಲಿ, ಜೂ.18: ಎಲ್ಲಾ ವರ್ಗದ ಜನರೂ ವರದಕ್ಷಿಣೆಯ ಪಿಡುಗಿನಿಂದ ಬಾಧಿತರಾಗಿದ್ದಾರೆ. ಸಿರಿವಂತರೂ ದುರಾಸೆಯಿಂದ ಹೊರತಾಗಿಲ್ಲ ಎಂದು ದಿಲ್ಲಿಯ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ವರದಕ್ಷಿಣೆ ಬೇಡಿಕೆಯನ್ನು ನಿರಾಕರಿಸಿದ ಕಾರಣ 23ರ ಹರೆಯದ ಪತ್ನಿಯನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ವ್ಯಕ್ತಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 ಈ ಪ್ರಕರಣದಲ್ಲಿ 2005ರಲ್ಲಿ ಮಹಿಳೆಯ ವಿವಾಹದ ಸಂದರ್ಭ ಆಕೆಯ ತಂದೆ ಅಳಿಯನಿಗೆ ಬೆಲೆಬಾಳುವ ಓಪ್ಟ್ರಾ ಕಾರು, ಚಿನ್ನದ ಆಭರಣ, 2.5 ಲಕ್ಷ ರೂ. ಹಾಗೂ ಇತರ ಮನೆಬಳಕೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ಆದರೆ ಕೆಲವೇ ದಿನಗಳಲ್ಲಿ ಇನ್ನಷ್ಟು ಹಣ ತರುವಂತೆ, ಐಷಾರಾಮಿ ಸ್ಕೋಡಾ ಕಾರು ಬೇಕೆಂದು ಹಾಗೂ ಇತರ ವಸ್ತುಗಳನ್ನು ತವರು ಮನೆಯಿಂದ ತರುವಂತೆ ಒತ್ತಾಯಿಸಿ ಮಹಿಳೆಗೆ ಚಿತ್ರಹಿಂಸೆ ನೀಡಲಾಗಿದೆ. ಚಿತ್ರಹಿಂಸೆ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಿಲ್ಲಿಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿತ್ತು.

ಆದರೆ ಇದನ್ನು ನಿರಾಕರಿಸಿದ್ದ ಪತಿಯ ಕುಟುಂಬದವರು, ತಾವೆಲ್ಲಾ ಮನೆಯಿಂದ ಹೊರಗಿದ್ದ ಸಂದರ್ಭ ಸೊಸೆಯ ಮನೆಯವರು ಬಂಗಾರದ ಒಡವೆಗಳನ್ನು ಕದ್ದು ತವರು ಮನೆಗೆ ಸಾಗಿಸಲು ಮುಂದಾಗಿದ್ದರು. ಈ ವಿಷಯ ಬಹಿರಂಗವಾದಾಗ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ತನ್ನ ಕುಟುಂಬ ಪತ್ನಿಯ ಕುಟುಂಬಕ್ಕಿಂತ ಶ್ರೀಮಂತವಾಗಿರುವ ಕಾರಣ ವರದಕ್ಷಿಣೆ ಕೇಳುವ ಸಾಧ್ಯತೆಯೇ ಇಲ್ಲ ಎಂದು ವಾದಿಸಿದ್ದರು. ಆದರೆ ಈ ಹೇಳಿಕೆಯನ್ನು ಒಪ್ಪದ ನ್ಯಾಯಾಲಯ, ಆರ್ಥಿಕ ಸ್ಥಿತಿವಂತರು ದುರಾಸೆ ಹೊಂದಿರುವುದಿಲ್ಲ ಎಂಬ ಯಾವುದೇ ನಿಯಮವಿಲ್ಲ. ಇಂದಿನ ದಿನಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನತೆಯೂ ವರದಕ್ಷಿಣೆ ಪಿಡುಗಿಗೆ ಬಲಿಯಾಗುತಿದ್ದಾರೆ ಎಂದು ತಿಳಿಸಿತಲ್ಲದೆ ಮೃತ ಮಹಿಳೆಯ ಪತಿ ಹಾಗೂ ಆತನ ಮನೆಯವರನ್ನು ಅಪರಾಧಿಗಳೆಂದು ಘೋಷಿಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News