6ನೇ ತರಗತಿ ಫೇಲಾದ ಮುಸ್ತಫಾ 200 ಕೋಟಿಯ ಪ್ರತಿಷ್ಠಿತ ಬ್ರಾಂಡ್ ನ ರೂವಾರಿ

Update: 2018-06-20 05:49 GMT

ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮವೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ಈ ಯುವಕ ಇಂದು 210 ಕೋಟಿ ರೂ.ಗಳ ವಹಿವಾಟು ನಡೆಸುವ ಕಂಪೆನಿಯೊಂದರ ಸಿಇಒ. ಜೀವನದಲ್ಲಿ ಮುಂದೇನು ಎನ್ನುವ ಚಿಂತೆಯಲ್ಲಿದ್ದಾಗ ತೋಚಿದ್ದ ಇಡ್ಲಿ, ದೋಸೆ ಮಾರಾಟದ ಯೋಜನೆಯೊಂದು ಮುಂದೆ ಈ ಯುವಕನ ಬದುಕಿನ ದಿಕ್ಕನ್ನೇ ಬದಲಿಸಿತು. ಭಾರತದ ಯಶಸ್ವಿ ಉದ್ಯಮಿಗಳಲ್ಲೊಬ್ಬರಾಗಿರುವ ಇವರು ವಿಶ್ವಸಂಸ್ಥೆಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ.

ಕೇರಳದ ವಯನಾಡ್ ನ ಚೆನ್ನಲೋಡ್ ಗ್ರಾಮದಲ್ಲಿ ಯಶಸ್ವಿ ಉದ್ಯಮಿ ಮುಸ್ತಫಾ ಪಿ.ಸಿ. ಬಡ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದರು.  ಬಾಲ್ಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ತಂದೆಯೇ ಆಸರೆಯಾಗಿದ್ದರು. ಪ್ರಾಥಮಿಕ ಶಿಕ್ಷಣವು 6ನೆ ತರಗತಿಯಲ್ಲಿದ್ದಾಗ ಮೊಟಕುಗೊಂಡಿದ್ದರೂ ಮ್ಯೂಥ್ಯೂ ಎಂಬ ಶಿಕ್ಷಕರೊಬ್ಬರು ವಿಶೇಷ ಕಾಳಜಿ ತೋರಿಸಿ ಮುಸ್ತಫಾರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾದರು. ಮುಂದೆ ಅವರು ಕ್ಯಾಲಿಕಟ್ ನ ಆರ್ ಇಸಿಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದರು. ನಂತರ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರು. ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಅವರು ನಂತರ ಭಾರತಕ್ಕೆ ತೆರಳಿ ಉದ್ಯಮವೊಂದನ್ನು ಆರಂಭಿಸುವುದಕ್ಕಾಗಿ  ಸೋದರ ಸಂಬಂಧಿಗಳ ಜೊತೆ ಬೆಂಗಳೂರಿಗೆ ಆಗಮಿಸಿದರು,

ಬೆಂಗಳೂರಿನಲ್ಲಿ ಯಾವ ಉದ್ಯಮ ಆರಂಭಿಸಬೇಕು?, ಹಣ ಹೂಡಿಕೆ ಹೇಗೆ?, ಯಾವ ಉದ್ಯಮ ಲಾಭದಾಯಕ? ಎನ್ನುವ ಗೊಂದಲದಲ್ಲಿರುವಾಗಲೇ ರಸ್ತೆ ಬದಿಯ ಸಣ್ಣ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರು ಪ್ಲಾಸ್ಟಿಕ್ ಲಕೋಟೆಯಲ್ಲಿ ದೋಸೆ ಮಾರುತ್ತಿದ್ದುದು ಇವರ ಗಮನಕ್ಕೆ ಬಂದಿತ್ತು. ಇದೇ ರೀತಿಯ ಉದ್ಯಮವನ್ನು ಆರಂಭಿಸಿದರೆ ಹೇಗೆ ಎನ್ನುವ ಉಪಾಯವನ್ನು ಮುಸ್ತಫಾರ ಸಂಬಂಧಿ ಶಂಸುದ್ದೀನ್ ಕೇಳಿದ್ದರು. ಇದೇ ಯೋಜನೆಯನ್ನು ಗಮನದಲ್ಲಿರಿಸಿದ ಆರಂಭಿಕ ಹಂತದಲ್ಲಿ 25 ಸಾವಿರ ರೂ. ಬಂಡವಾಳದೊಂದಿಗೆ ಸಂಬಂಧಿಗಳ ಜೊತೆಗೆ ಮುಸ್ತಫಾ ಪಿ.ಸಿ. ತಮ್ಮ ಇಡ್ಲಿ ಉದ್ಯಮ 'ಐಡಿ'ಯನ್ನು ಆರಂಭಿಸಿದರು,

20 ಅಂಗಡಿಗಳಿಗೆ ಇಡ್ಲಿ ಒದಗಿಸುವುದು ಈ ತಂಡದ ಮೊದಲ ಯೋಜನೆಯಾಗಿತ್ತು. ಶುಚಿತ್ವ ಮತ್ತು  ಗುಣಮಟ್ಟದ ಕಾರಣ ದಿನದಿಂದ ದಿನಕ್ಕೆ ‘ಐಡಿ’ ಹೆಸರುವಾಸಿಯಾಯಿತು. ಮೊದಲ ತಿಂಗಳಲ್ಲಿ ಈ ತಂಡ 400 ರೂ. ಲಾಭ ಗಳಿಸಿತ್ತು. ‘ಐಡಿ’ ತಂಡವು 100 ಪ್ಯಾಕೆಟ್ ಗಳ ಗುರಿ ತಲುಪಿದ ನಂತರ ಮುಸ್ತಫಾ ಸಂಸ್ಥೆಗೆ 6 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರು. ಅಂದಿನಿಂದ ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ. ಬೆಂಗಳೂರು, ಚೆನ್ನೈ, ಪುಣೆ, ಮುಂಬೈ, ದಿಲ್ಲಿ, ಹೈದರಾಬಾದ್, ಮಂಗಳೂರು ಹಾಗು ದುಬೈಗಳಲ್ಲಿ ‘ಇಡಿ’ ಉತ್ಪನ್ನಗಳು ಲಭ್ಯವಿದ್ದು, 210 ಕೋಟಿ ರೂ. ವಹಿವಾಟಿನ ಉದ್ಯಮವಾಗಿ ಇವರ ಸಂಸ್ಥೆ ತಲೆಯೆತ್ತಿ ನಿಂತಿದೆ.  

ಇಂದು ಪ್ರತಿದಿನ 50 ಸಾವಿರ ಕೆ.ಜಿ.ಗಳಿಗೂ ಹೆಚ್ಚು ಪ್ಯಾಕ್ ತಯಾರಾಗುವ 'ಐಡಿ'ಯಲ್ಲಿ 1,600 ಉದ್ಯೋಗಿಗಳಿದ್ದಾರೆ. 'ಐಡಿ' 210 ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದು ಸಂಸ್ಥೆಯ ಸಿಇಒ ಪಿ.ಸಿ. ಮುಸ್ತಫಾ ಹೇಳುತ್ತಾರೆ.

ಭಾರತದ ಯಶಸ್ವಿ ಯುವ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಸ್ತಫಾ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿ ತಮ್ಮ ಪ್ರಯತ್ನ, ಯಶಸ್ಸಿನ ಹೆಜ್ಜೆಗಳನ್ನು ತೆರೆದಿಟ್ಟಿದ್ದಾರೆ.

ವಿಶ್ವಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, “ಸಾಮಾನ್ಯಜ್ಞಾನ ಯಾವುದೇ ಉದ್ಯಮಕ್ಕೂ ಅತ್ಯಗತ್ಯವಾಗಿದೆ. ‘ಇಡಿ’ಯ ಆರಂಭದ ದಿನಗಳಿಂದ ಇಂದಿನವರೆಗೂ ನಾವು ಗುಣಮಟ್ಟ ಹಾಗು ನೈಸರ್ಗಿಕತೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಕೆಲ ಕಠಿಣ ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಧೈರ್ಯ ಪ್ರತಿಯೊಬ್ಬ ಉದ್ಯಮಿಗೂ ಇರಬೇಕು. ಇದೇ ಧೈರ್ಯದ ಕಾರಣ ಇಂದು ನಮ್ಮ ಸಂಸ್ಥೆ ಈ ಮಟ್ಟಿಗೆ ಬೆಳೆದು ನಿಂತಿದೆ” ಎಂದು ಹೇಳಿದರು.

ಚೆನ್ನೈ ಪ್ರವಾಹದ ಸಂದರ್ಭ ಯಾವುದೇ ಲಾಭಾಂಶದ ಹಿಂದೆ ಹೋಗದೆ ಉಚಿತವಾಗಿ ಚೆನ್ನೈ ನಿವಾಸಿಗಳಿಗೆ  ಇಡ್ಲಿ ಹಂಚಿದ್ದನ್ನು ನೆನಪಿಸಿಕೊಂಡ ಅವರು, "ಜಗತ್ತಿನ ಪ್ರತಿಯೊಬ್ಬರ ಹಸಿವನ್ನೂ ನೀಗಿಸಬೇಕೆನ್ನುವ ಗುರಿ ನಮಗಿದೆ" ಎಂದರು. ಇಷ್ಟೇ ಅಲ್ಲದೆ ಸಂಸ್ಥೆಯ ಆರಂಭಿಕ ದಿನಗಳಲ್ಲಿ ಎದುರಾದ ಸಂಕಷ್ಟಗಳು ಹಾಗು ಅದನ್ನು ಎದುರಿಸಿ ಯಶಸ್ವಿಯಾದುದರ ಬಗ್ಗೆಯೂ ವಿವರಿಸಿದರು.

 

ತನ್ನ ಗ್ರಾಮದ ಸೌಹಾರ್ದತೆಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಅವರು, "ನನ್ನ ಗ್ರಾಮದಲ್ಲಿ 100ಕ್ಕೂ ಅಧಿಕ ಕುಟುಂಬಗಳಿವೆ. ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಬಾಳುತ್ತಿದ್ದಾರೆ. ನನ್ನೂರಲ್ಲಿ ಚರ್ಚ್, ದೇವಸ್ಥಾನ ಮತ್ತು ಮಸೀದಿಗಳಿವೆ. ಪ್ರತಿಯೊಂದು ಧರ್ಮದ ಆಚರಣೆಯಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ನನ್ನ ತಂದೆಗೆ ಗ್ರಾಮದಲ್ಲಿರುವ ಪ್ರತಿಯೊಂದು ಮನೆಯ ಪರಿಚಯವೂ ಇದೆ. ನಮ್ಮ ನಡುವೆ ಸೌಹಾರ್ದ ಬಾಂಧವ್ಯ ಗಟ್ಟಿಯಾಗಿ ನೆಲೆನಿಂತಿದೆ" ಎಂದು ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News