ಜೂ. 22: ಬಿಟ್ಸ್ ಪಿಲಾನಿ ನಿರ್ದೇಶಕ ಪ್ರೊ. ಜಿ.ರಘುರಾಮ್ ರಿಂದ ವಿಶೇಷ ಉಪನ್ಯಾಸ

Update: 2018-06-19 11:26 GMT
ಪ್ರೊ. ಜಿ.ರಘುರಾಮ್

ಮಂಗಳೂರು, ಜೂ. 19: ದೇಶದ ಅಗ್ರಗಣ್ಯ ಉನ್ನತ ಶಿಕ್ಷಣ ಸಂಸ್ಥೆಯಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ (ಬಿಟ್ಸ್) ಪಿಲಾನಿ, ಕೆ.ಕೆ. ಬಿರ್ಲಾ ಗೋವಾ ಕ್ಯಾಂಪಸ್ ನಿರ್ದೇಶಕ ಪ್ರೊ.ಜಿ.ರಘುರಾಮ್ ಅವರಿಂದ ನಗರದ ಅಲೋಶಿಯಸ್ ಕಾಲೇಜಿನಲ್ಲಿ ಈ ತಿಂಗಳ 22ರಂದು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.

ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ (1975-78)ಯಾಗಿರುವ ರಘುರಾಮ್ ಅವರು ದೇಶದ ಅತ್ಯುನ್ನತ ಸಂಸ್ಥೆಯ ನಿರ್ದೇಶಕರಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಕಾಲೇಜಿನ ಭೌತಶಾಸ್ತ್ರ ವಿಭಾಗ ಹಮ್ಮಿಕೊಂಡಿದೆ. ದೇಶ ವಿದೇಶಗಳ ಹಲವು ಕಡೆಗಳಲ್ಲಿ ಉಪನ್ಯಾಸ ನೀಡಿದ ಹೆಗ್ಗಳಿಕೆ ಇವರದ್ದು.

ಅಂದು ಬೆಳಗ್ಗೆ 9 ಗಂಟೆಗೆ ಕಾಲೇಜಿನ ಫಾದರ್ ಎಲ್.ಎಫ್. ರಸ್ಕಿನಾ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ನಡೆಯಲಿದ್ದು, ಪ್ರಾಚಾರ್ಯ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸುವರು. ಭವಿಷ್ಯಕ್ಕೆ ಯುವಜನತೆ ಹೇಗೆ ಸಜ್ಜಾಗಬೇಕು ಎಂಬ ವಿಷಯದ ಬಗ್ಗೆ ಪ್ರೊ. ರಘುರಾಮ್ ಉಪನ್ಯಾಸ ನೀಡುವರು ಎಂದು ಸಂಯೋಜಕ ಡಾ. ನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆ ಏಳ್ಕಾನ ಗ್ರಾಮದ ಗುಣಾಜೆಯವರಾದ ರಘುರಾಮ್, ಪೆರಡಾಲ ಮಹಾಜನ ಸಂಸ್ಕೃತ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದು, ಬಿಎಸ್ಸಿ ಪದವಿಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿದ್ದಾರೆ. ಮದ್ರಾಸ ಐಐಟಿಯಲ್ಲಿ ಎಂಎಸ್ಸಿ ಪದವಿ, ಬೆಂಗಳೂರಿನ ಐಐಎಸ್‌ಸಿಯಲ್ಲಿ ಪಿಎಚ್‌ಡಿ ಪದವಿ ಪಡೆದರು.

1987ರಿಂದ ಬಿಟ್ಸ್ ಪಿಲಾನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಇಇಇ ವಿಭಾಗದ ಪ್ರೊಫೆಸರ್ ಆಗಿ, 2010ರಲ್ಲಿ ಪಿಲಾನಿ ಕ್ಯಾಂಪಸ್ ನಿರ್ದೇಶಕರಾಗಿ ಬಡ್ತಿ ಹೊಂದಿದರು. 2016ರಿಂದ ಗೋವಾ ಕ್ಯಾಂಪಸ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News