ಜು.5 ರೊಳಗೆ ಶಿರಾಡಿ ಘಾಟಿ ರಸ್ತೆ ವಾಹನ ಸಂಚಾರಕ್ಕೆ ಮುಕ್ತ: ಸಚಿವ ರೇವಣ್ಣ

Update: 2018-06-19 14:02 GMT

ಮಂಗಳೂರು, ಜೂ.19: ಶಿರಾಡಿ ಘಾಟಿ ರಸ್ತೆಯಲ್ಲಿ ನಡೆಯುತ್ತಿರುವ ದ್ವಿತೀಯ ಹಂತದ ಕಾಮಗಾರಿ ನಾಲ್ಕೈದು ದಿನಗಳಲ್ಲಿ ಮುಗಿಯಲಿದೆ. ಬಳಿಕ ಸುಮಾರು 10 ದಿನಗಳ ವಾಟರ್ ಕ್ಯೂರಿಂಗ್ ನಡೆದು ಜುಲೈ 5ರೊಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಗಿರುವ ಮಳೆಹಾನಿ ಹಾಗೂ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.

ಚಾರ್ಮಾಡಿ, ಸಂಪಾಜೆ, ಶಿರಾಡಿ ಘಾಟಿಗಳು ಹಾಗೂ ಸುಬ್ರಹ್ಮಣ್ಯದಿಂದ ಒಣಗೂರು ಹೋಗುವ ರಸ್ತೆ ಘಾಟಿ ರಸ್ತೆಗಳಾಗಿವೆ. ಮಂಗಳೂರಿನಲ್ಲಿ ಕೆಲವು ಕಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಫ್ಲೈ ಓವರ್‌ಗಳಿಂದಾಗಿ ಸಮಸ್ಯೆ ಆಗಿರುವುದಾಗಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಚಾರ್ಮಾಡಿ ಘಾಟಿಯಲ್ಲಿ ಪಕ್ಕಾ ರಸ್ತೆ ನಿರ್ಮಾಣಕ್ಕೆ 250 ಕೋಟಿ ರೂ.ಗಳ ಅಗತ್ಯವಿದೆ. ಅದಕ್ಕೂ ಕೇಂದ್ರ ಸರಕಾರಕ್ಕೆ ವಿಸ್ತೃತ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಲಾಗುವುದು. ಶಿರಾಡಿ, ಸಂಪಾಜೆ, ಒಣಗೂರು ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಬಿಸಿರೋಡ್‌ ನಿಂದ ಸಂಪಾಜೆ, ಪುತ್ತೂರು ಹಾಗೂ ಸುಳ್ಯಕ್ಕೆ ಹೋಗುವ ರಸ್ತೆಯನ್ನು ಎರಡೂ ಬದಿಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಂಪರ್ಕವಿರಿಸಿಕೊಂಡು ಅಧಿಕಾರಿಗಳ ಸಭೆ ನಡೆಸಿ, ಅರಣ್ಯ ಹಾಗೂ ಸಾರ್ವಜನಿಕರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತಿರುವುದಾಗಿ ಸಚಿವ ರೇವಣ್ಣ ತಿಳಿಸಿದರು.

ಫ್ಲೈ ಓವರ್ ವಾರದೊಳಗೆ ಸಭೆ ನಡೆಸಿ ಕ್ರಮ

ಮಂಗಳೂರಿನಲ್ಲಿ ಇತ್ತೀಚೆಗೆ ಭಾರೀ ಮಳೆ ಸುರಿದ ವೇಳೆ ನಗರದ ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್‌ನ ನಿಧಾನಗತಿಯ ಕಾಮಗಾರಿಯಿಂದಾಗಿ ಕೃತಕ ನೆರೆಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಇದೇ ಸಮಸ್ಯೆ ಇರುವುದಾಗಿ ಅಲ್ಲಿನ ಜಿಲ್ಲಾಧಿಕಾರಿಯೂ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗಾಗಿ ಇಲಾಖಾ ಕಾರ್ಯದರ್ಶಿಗಳು ಒಂದು ವಾರದೊಳಗೆ ಉಡುಪಿ ಮತ್ತು ದ.ಕ. ಜಿಲ್ಲಾಧಿಕಾರಿಯವರ ಕಾಲಾವಕಾಶದ ಮೇರೆಗೆ ಒಂದು ದಿನ ಬಂದು ಇಲ್ಲಿ ಸಭೆ ನಡೆಸಿ ಎರಡೂ ಜಿಲ್ಲೆಗಳ ಸಮಸ್ಯೆಯನ್ನು ಇಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲು ಸೂಚಿಸುತ್ತಿರುವುದಾಗಿ ಸಚಿವ ರೇವಣ್ಣ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಳೆ ಹಾನಿ: ಹಣ ಬಿಡುಗಡೆ

ದ.ಕ. ಜಿಲ್ಲೆಯಲ್ಲಿ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ 6 ಕೋಟಿ ರೂ. ಹಾಗೂ ಉಡುಪಿ ಜಿಲ್ಲೆಯಲ್ಲಿ 1.20 ಕೋಟಿ ರೂ. ನಷ್ಟ ಆಗಿರುವುದಾಗಿ ತಿಳಿಸಿದ್ದಾರೆ. ಅವರು ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಎರಡೂ ಜಿಲ್ಲೆಗಳಿಗೂ ಹಣ ಒದಗಿಸುವುದಾಗಿ ಸಚಿವ ರೇವಣ್ಣ ತಿಳಿಸಿದರು.

ಬೆಳ್ತಂಗಡಿಯ ಸುಮಾರು 200 ಕಿ.ಮೀ. ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಮಳೆಯಿಂದಾಗಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು, ಶಿರಾಡಿ ಘಾಟಿ ಕೂಡಾ ಬಂದ್ ಆಗಿರುವುದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿ ರಸ್ತೆಗಳಿಗೆ ತೊಂದರೆಯಾಗಿದೆ. ತಾಲೂಕಿನ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಂಟ್ವಾಳದಿಂದ ಸುಳ್ಯದವರೆಗಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಹಾಗಾಗಿ ರಸ್ತೆಯಲ್ಲೇ ಮಳೆ ನೀರು ಹರಿಯುತ್ತಿದೆ. ಮೂಡಬಿದ್ರೆಯಲ್ಲಿ 106 ಕಿ.ಮೀ. ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಡುತ್ತದೆ. ಮಳೆಯಿಂದಾಗಿ ಪ್ರಮುಖ ರಸ್ತೆಗಳು ಹಾಳಾಗಿ 2.5 ಕೋಟಿ ರೂ. ನಷ್ಟವಾಗಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದ.ಕ. ಜಿಲ್ಲೆಯ ಎಲ್ಲಾ ಲೋಕೋಪಯೋಗಿ ಇಲಾಖೆ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಜಿಲ್ಲೆಯ ಮಳೆಹಾನಿ ವಿವರ ನೀಡುತ್ತಾ, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ 19 ಕೋಟಿ ರೂ. ನಷ್ಟವಾಗಿದ್ದು, 6 ಕೋಟಿ ರೂ. ನಷ್ಟ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದಾಗಿದೆ ಎಂದರು.

ಭೂಕುಸಿತ ತಡೆಯಲು ತಡೆಗೋಡೆಗೆ ಪ್ರತ್ಯೇಕ ಸಮೀಕ್ಷೆಗೆ ಜಿಲ್ಲಾಧಿಕಾರಿ ಸಲಹೆ

ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಭೂಕುಸಿತದ ಪ್ರಕರಣಗಳು ಸಂಭವಿಸಿವೆ. ಘಾಟಿ ಪ್ರದೇಶಗಳು ಹಾಗೂ ಗುಡ್ಡ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ಮನೆಗಳಿಗೆ ಹಾನಿಯಾಗಿವೆ. ಹಾಗಾಗಿ ಭೂಕುಸಿತಕ್ಕೆ ಸಂಬಂಧಿಸಿ ತಡೆಗೋಡೆಗಳ ನಿರ್ಮಾಣಕ್ಕೆ ಪ್ರತ್ಯೇಕ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಲಹೆ ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪಡುಬಿದ್ರೆ ಬಳಿ ಕಳೆದ ಎರಡು ವರ್ಷಗಳಿಂದ ಫ್ಲೈಓವರ್ ನಿರ್ಮಿಸುತ್ತಿದ್ದು, ಕಾಮಗಾರಿ ವಿಳಂಬದಿಂದಾಗಿ ಸಮಸ್ಯೆ ಆಗಿರುವುದಾಗಿ ಗಮನ ಸೆಳೆರು.

ಕರಾವಳಿ ಬೈಪಾಸ್, ಕುಂದಾಪುರ ಜಂಕ್ಷನ್‌ಗಳಲ್ಲಿಯೂ ಫ್ಲೈಓವರ್ ಕಾುಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಉಡುಪಿಯಲ್ಲಿ ಮಳೆಯಿಂದಾಗಿ 12 ಕೋಟಿ ರೂ. ನಷ್ಟವಾಗಿದ್ದು, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿ 1.17 ಕೋಟಿರೂ. ನಷ್ಟವಾಗಿದೆ ಎಂದರು.

ಸಭೆಯಲ್ಲಿ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಉಡುಪಿ ಸಿಇಒ ಶಿವಾನಂದ ಕಾಪಸೆ, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಕೆಆರ್‌ಡಿಸಿಎಲ್ ಎಂಡಿ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News