ಚಾಲನಾ ಪರವನಿಗೆ ನೀಡಿಕೆಯಲ್ಲಿ ವಿಳಂಬ ದೂರು: ಆರ್‌ಟಿಒ ಜನ ಸ್ಪಂದನ ಸಭೆ

Update: 2018-06-19 14:12 GMT

ಮಂಗಳೂರು, ಜೂ.19 : ನಗರದ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕಲಿಕಾ ಮತ್ತು ಚಾಲನಾ ಅನುಜ್ಞಾ ಪತ್ರ ಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸಾರಥಿ- 4 ತಂತ್ರಾಂಶವನ್ನು ಅಳವಡಿಸಲಾದ ಬಳಿಕ ವಿಳಂಬವಾಗುತ್ತಿದೆ ಎನ್ನುವ ದೂರಿನ ಬಗ್ಗೆ ಗಮನ ಹರಿಸಲಾಗುವುದು. ತ್ವರಿತ ಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಭಾರ ಪ್ರಾದೇಶಿಕ ಸಾರಿಗೆ ಜೋನ್ ಮಿಸ್ಕತ್ ತಿಳಿಸಿದ್ದಾರೆ.

ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ಪ್ರತಿ ಮಂಗಳವಾರ ನಡೆಸಲುದ್ದೇಶಿಸಿರುವ ಜನಸ್ಪಂದನ ಸಭೆಯ ಪ್ರಕಾರ ಇಂದು ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜೂನ್ ಒಂದರಿಂದಲೇ ಸಾರಥಿ-4 ಅಳವಡಿಕೆ ಯೋಜನೆಯ ಪ್ರಕಾರ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ನಡೆಯುತ್ತಿದೆ. ಆದರೆ ಚಾಲನಾ ಪರವಾನಿಗೆ ಮಾತ್ರ ಹಿಂದಿಗಿಂತಲೂ ನಿಧಾನವಾಗಿ ನೀಡಲಾಗುತ್ತಿದೆ. 30 ಜನರಿಗೆ ಮಾತ್ರ ಒಂದು ದಿನದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಇದರಿಂದ ವಿಳಂಬವಾಗುತ್ತಿದೆ ಎಂದು ಜಿ.ಕೆ.ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರೀಯೆ ನೀಡಿದ ಆರ್‌ಟಿಒ ಮಾತನಾಡುತ್ತಾ, ಸದ್ಯ ಅಳವಡಿಸಲಾದ ತಂತ್ರಜ್ಞಾನಕ್ಕೆ ಕಚೇರಿಯ ಸಿಬ್ಬಂದಿಗಳು ಹೊಂದಿಕೊಳ್ಳುತ್ತಿರುವುದರಿಂದ 30ಕ್ಕೆ ಸೀಮಿತಗೊಳಿಸಲಾಗಿದೆ ಶಿಘ್ರದಲ್ಲಿ ಈ ಸಂಖ್ಯೆಯನ್ನು ಏರಿಸುತ್ತಾ ಹೆಚ್ಚಿನವರಿಗೆ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಸಭೆಗೆ ತಿಳಿಸಿದರು.

ಬಸ್ ತಂಗುದಾಣದ ಸಮಸ್ಯೆ:- ನಗರದ ಲೇಡಿ ಹಿಲ್‌ನಿಂದ ಲೈಟ್ ಹೌಸ್‌ವರೆಗೆ ಯಾವೂದೇ ಬಸ್ ತಂಗುದಾಣದ ವ್ಯವಸ್ಥೆಯಿಲ್ಲ ಈ ಬಗ್ಗೆ ಮನಪಾ ಕಚೇರಿಗೆ ದೂರು ನೀಡಿದರೂ ಪ್ರಯೋಜನ ವಾಗಲಿಲ್ಲ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ಅವರು 6 ವಾರದಲ್ಲಿ ಬಸ್ ನಿಲುಗಡೆಗೆ ತಾತ್ಕಲಿಕ ವ್ಯವಸ್ಥೆ ಮಾಡಲು ಆದೇಶ ನೀಡಿ ಆರು ತಿಂಗಳಾದರೂ ವ್ಯವಸ್ಥೆಯಾಗಿಲ್ಲ ಈ ಬಗ್ಗೆ ಮನಪಾ ಅಧಿಕಾರಿಗಳಿಗೆ ಆರ್‌ಟಿ ಒ ಮೂಲಕ ಸೂಚನೆ ನೀಡುವಂತೆ ಬೆ.ಎ.ಹಸನಬ್ಬ ಅಮ್ಮೆಂಬಳ ಆಗ್ರಹಿಸಿದರು.

ಖಾಸಗಿ ಬಸ್ಸುಗಳ ಚಾಲಕರು ಬಸ್‌ಗಳಿಗೆ ಪರವಾನಿಗೆ ಮಾರ್ಗದಲ್ಲಿ ಸಂಚರಿಸದೆ ಅವರಿಗೆ ಬೇಕಾದ ದಾರಿಯಲ್ಲಿ ಸಾಗುತ್ತಾರೆ ಎಂದು ಸುಲ್ತಾನ್ ಬತ್ತೇರಿಯ ಮಾದವ ದೂರು ನೀಡಿದರು. ಸುಲ್ತಾನ್ ಬತ್ತೇರಿಯ ಕಡೆ ಸಂಚರಿಸುವ ಕೆಲವು ಬಸ್‌ಗಳು ಈ ರೀತಿ ಸಂಚರಿಸುತ್ತವೆ ಎಂದು ಮಾಧವ ದೂರಿದರು. ಕೊಣಾಜೆಯ ಬಳಿ ಹೋಗುವ ಬಸ್ಸುಗಳು ವಿಶ್ವ ವಿದ್ಯಾನಿಲಯದ ಆವರಣ ಒಳಗೆ ಬಂದು ಮುಡಿಪಿಗೆ ತೆರಳಬೇಕು ಎಂದು ಹಸನಬ್ಬ ಆಗ್ರಹಿಸಿದರು. ಸಭೆಯಲ್ಲಿ ಗಮನಕ್ಕೆ ತಂದ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರಭಾರ ಆರ್‌ಟಿಒ ಅಧಿಕಾರಿ ತಿಳಿಸಿದ್ದಾರೆ.

ಹಳೆ ವಾಹನಗಳ ಪರವಾನಿಗೆ ನವೀಕರಣದಲ್ಲೂ ವಿಳಂಬವಾಗುತ್ತಿದೆ ಎಂದು ಮಾರ್ಟಿನ್ ಎಂಬವರು ದೂರು ನೀಡಿದರು. ಈ ಸಮಸ್ಯೆ ಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಆರ್‌ಟಿಒ ತಿಳಿಸಿದರು.

 ಕಂಕನಾಡಿ ರೈಲ್ವೇ ನಿಲ್ದಾಣದಿಂದ ಬಸ್ ವ್ಯವಸ್ಥೆ ಬಗ್ಗೆ ದೂರು ನೀಡಿದರು ಸಮಸ್ಯೆ ಬಗೆಹರಿದಿಲ್ಲ. ಕಂಕನಾಡಿಯಿಂದ -ಸ್ಟೇಟ್ ಬ್ಯಾಂಕ್‌ವರೆಗೆ 7 ಕಿ ಮೀ ದೂರ ಇದ್ದರೂ ಬಸ್ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹತ್ತಿರದ ಪ್ರದೇಶಗಳಿಗೆ ಸಂಚರಿಸುವ ಬಸ್ಸುಗಳನ್ನು ಕಂಕನಾಡಿ ರೈಲ್ವೇ ಸ್ಟೇಷನ್ ಮಾರ್ಗವಾಗಿ ಸಂಚರಿಸುವಂತೆ ಮಾಡಿದರೆ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಜಿ.ಕೆ.ಭಟ್ ತಿಳಿಸಿದ್ದಾರೆ.ಈ ಬಗ್ಗೆ ಸೂಚನೆ ನೀಡುವುದಾಗಿ ಆರ್‌ಟಿಒ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News