×
Ad

ಕೃಷಿ ಬಿಕ್ಕಟ್ಟಿಗೆ ರೈತ ವಿರೋಧಿ ಕಾನೂನುಗಳು ಕಾರಣ: ಸರ್ವೋಚ್ಚ ನ್ಯಾಯಾಲಯದಲ್ಲಿ ರೈತರ ದೂರು

Update: 2018-06-19 21:14 IST

ಮುಂಬೈ, ಜೂ.19: ಬೆಳೆಗಳಿಗೆ ಹೆಚ್ಚಿನ ಬೆಲೆ ಮತ್ತು ಇತರ ವಿಷಯಗಳ ಕುರಿತು ತನ್ನ ಹೋರಾಟವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ದಿರುವ ರೈತರ ಸಂಘಟನೆಯೊಂದು ಸಂವಿಧಾನದ 31ಬಿ ಅನುಚ್ಛೇದವನ್ನು ಪ್ರಶ್ನಿಸಿದೆ. ಈ ಅನುಚ್ಛೇದವು ರೈತರ ವಿರುದ್ಧವಾಗಿದೆ ಎಂದು ಅದು ವಾದಿಸಿದೆ.

ಅನುಚ್ಛೇದ 31ಬಿ ಮತ್ತು ಅದರಡಿಯ ಅನುಸೂಚಿಯನ್ನು ಸಂವಿಧಾನದಿಂದ ತೆಗೆದುಹಾಕುವಂತೆ ಕೋರಿ ರೈತಪರ ಹೋರಾಟಗಾರ ಅಮರ ಹಬೀಬ್ ಅವರು ಮಹಾರಾಷ್ಟ್ರದಲ್ಲಿ ಹುಟ್ಟು ಹಾಕಿರುವ ಕಿಸಾನ್ ಪುತ್ರ ಆಂದೋಲನ(ಕೆಪಿಎ)ವು ಮಾ.21ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅಹವಾಲನ್ನು ಸಲ್ಲಿಸಿದೆ.

31ಬಿ ಅನುಚ್ಛೇದವು ರದ್ದುಗೊಂಡರೆ ದೇಶದಲ್ಲಿ ಕೃಷಿ ಬಿಕ್ಕಟ್ಟಿಗೆ ಕಾರಣವಾಗಿರುವ ಹಲವಾರು ಕಾನೂನುಗಳನ್ನು ಪ್ರಶ್ನಿಸಲು ರೈತರ ಮಾರ್ಗ ಸುಗಮಗೊಳ್ಳಲಿದೆ ಎನ್ನುವುದು ಕೆಪಿಎ ಸದಸ್ಯರ ಅಭಿಪ್ರಾಯವಾಗಿದೆ.

ಈ ಕಾನೂನುಗಳ ಪೈಕಿ ಕೆಲವು ಸಂವಿಧಾನದ ಒಂಭತ್ತನೇ ಅನುಸೂಚಿಯ ಭಾಗವಾಗಿರುವ ಕೃಷಿ ಭೂ ಮಿತಿ ಕಾಯ್ದೆ,ಅಗತ್ಯ ಸರಕುಗಳ ಕಾಯ್ದೆ ಮತ್ತು ಭೂ ಸ್ವಾಧೀನ ಕಾಯ್ದೆಗಳಡಿ ಇವೆ ಎಂದು ಕೆಪಿಎ ಹೇಳಿದೆ. ಒಂಭತ್ತನೇ ಅನುಸೂಚಿಯಡಿಯ ಕಾನೂನುಗಳು ನ್ಯಾಯಾಂಗ ಪರಾಮರ್ಶೆಗೆ ಮುಕ್ತವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಬೀದಿ ಪ್ರತಿಭಟನೆಗಳಿಗೆ ಇಳಿಯುವ ಬದಲು ಕೆಪಿಎ ಕೃಷಿ ಬಿಕ್ಕಟ್ಟಿನ ಮೂಲ ಕಾರಣವನ್ನು ಗುರುತಿಸಿದೆ ಮತ್ತು ನ್ಯಾಯಾಂಗದ ನೆರವಿನಿಂದ ಅದನ್ನು ನಿವಾರಿಸಲಿದೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಬೀಬ್ ತಿಳಿಸಿದರು.

ಈ ಕಾನೂನುಗಳು ಹೇಗೆ ರೈತ ವಿರೋಧಿಯಾಗಿವೆಯೆಂದು ವಿವರಿಸಿದ ಅರ್ಜಿದಾರ ಹಾಗು ಕೆಪಿಎ ಕಾರ್ಯಕರ್ತ ಮಕರಂದ ದೋಯಿಜಾದ್ ಅವರು,ಅಗತ್ಯ ಸರಕುಗಳ ಕಾಯ್ದೆಯನ್ವಯ ಕೃಷಿಕರನ್ನು ಹೊರತುಪಡಿಸಿ ಪ್ರತಿಯೊಂದೂ ವ್ಯವಹಾರದಲ್ಲಿ ತನ್ನ ಉತ್ಪನ್ನದ ಬೆಲೆ,ದಾಸ್ತಾನು ಸಾಮರ್ಥ್ಯ ಮತ್ತು ರವಾನೆಯ ಕುರಿತು ನಿರ್ಧರಿಸುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಿದ್ದಾನೆ. ಕೇಂದ್ರ ಸರಕಾರವು ಎಲ್ಲ ಹಕ್ಕುಗಳನ್ನು ತನ್ನ ಬಳಿಯಿಟ್ಟುಕೊಂಡಿದ್ದು,ಕೃಷಿ ಉತ್ಪನ್ನದ ಬೆಲೆಗಳು ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲವನ್ನೂ ಅದೇ ನಿರ್ಧರಿಸುತ್ತಿದೆ ಎಂದು ಹೇಳಿದರು.

ರೈತರ ಭೂ ಹಿಡುವಳಿಯ ಮೇಲೂ ಸರಕಾರವು ನಿರ್ಬಂಧವನ್ನು ಹೇರಿದ್ದು,ನಿಗದಿತ ಮಿತಿಗಿಂತ ಹೆಚ್ಚಿನ ಜಮೀನನ್ನು ಅವರು ಹೊಂದಿರುವಂತಿಲ್ಲ ಎಂದೂ ಅವರು ತಿಳಿಸಿದರು.

ಒಂಭತ್ತನೇ ಅನುಸೂಚಿಯಲ್ಲಿನ ಕಾನೂನುಗಳು ಕರಾಳ ಸ್ವರೂಪದ್ದಾಗಿದ್ದು, ಇವುಗಳನ್ನು ರದ್ದುಗೊಳಿಸುವಲ್ಲಿ ನಾವು ಯಶಸ್ವಿಯಾದರೆ ಸರಕಾರವು ಯಾವುದೇ ಕೃಷಿ ಸಾಲವನ್ನು ಮನ್ನಾ ಮಾಡಬೇಕಾಗಿಲ್ಲ ಎಂದು ಹಬೀಬ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News