’ಛಾಯಾಗ್ರಾಹಕ ಭೀಷ್ಮ’ ಖ್ಯಾತಿಯ ಅಜಂತಾದ ರಾಘವ ಶ್ಯಾನುಭಾಗ್ ನಿಧನ

Update: 2018-06-19 16:15 GMT

ಮೂಡುಬಿದಿರೆ, ಜೂ. 19: ಹಿರಿಯ ಛಾಯಾಗ್ರಾಹಕ, ಪತ್ರಕರ್ತ, ಕಲಾವಿದರಾಗಿದ್ದ ರಾಘವ ಶ್ಯಾನುಭಾಗ್ (83) ಅಲ್ಪ ಕಾಲದ ಅಸೌಖ್ಯದಿಂದ ಹನುಮಂತ ನಗರದಲ್ಲಿರುವ ತಮ್ಮ ಕಾತ್ಯಾಯಿನಿ ನಿವಾಸದಲ್ಲಿ ಸೋಮವಾರ ತಡರಾತ್ರಿ ನಿಧನ ಹೊಂದಿದರು.

ಅವರು ಪತ್ನಿ, ಛಾಯಾಗ್ರಾಹಕ ರಾಜೇಶ್ ಶ್ಯಾನುಭಾಗ್ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.

ಮೂಲತಃ ಹೊನ್ನಾವರದ ಕೂಡ್ಲು ಪರಿಸರದವರಾದ ರಾಘವ ಶ್ಯಾನುಭಾಗ್ ಮಣಿಪಾಲದ ಶಿಲ್ಪಿ ಡಾ.ಟಿಎಂ.ಎ. ಪೈಯವರ ಪ್ರೋತ್ಸಾಹದಿಂದ ಅಲ್ಲಿನ ಕೆ.ಎಂ.ಸಿ ಆಸ್ಪತ್ರೆಯ ಆರಂಭಿಕ ವರ್ಷಗಳಲ್ಲಿ ವೈದ್ಯಕೀಯ ವಿಭಾಗದಲ್ಲಿ ಚಿತ್ರಕಾರರಾಗಿ, ಛಾಯಾಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿ ಮುಂದೆ ಟಿಎಂಎ ಪೈಯವರ ಆಪ್ತ ಸಹಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

ಅಂದಿನ ’ನವ ಭಾರತ’ ಪತ್ರಿಕೆಯ ಛಾಯಾಗ್ರಾಹಕರಾಗಿ ಗೋವಾ ಸ್ವಾತಂತ್ರ್ಯ ಸಮರ, ಮಂಗಳೂರಿನಲ್ಲಿ ನೆಹರೂ, ಮಣಿಪಾಲದಲ್ಲಿ ಇಂದಿರಾಗಾಂಧಿ, 1962ರಲ್ಲಿ ಮುಂಬೈನಲ್ಲಿ ಕ್ರೈಸ್ತ ಮಹಾಗುರು ಪೋಪ್, ಮೈಸೂರಿನ ಜಯ ಚಾಮರಾಜೇಂದ್ರ ಒಡೆಯರ್ ಹೀಗೆ ಹಲವು ಗಣ್ಯರನ್ನು ತನ್ನ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದ ಶ್ಯಾನುಭಾಗ್ ನವಭಾರತ ವರದಿಗಾರರಾಗಿ, ಶಿಂಗಣ್ಣ ಕಾಲಂನ ಚಿತ್ರಕಾರರಾಗಿ, ಪತ್ರಿಕೆಯ ನಿರ್ವಾಹಕರಾಗಿ, ಮಂಗಳೂರಿನಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡರು.

ಅಂದಿನ ದಿನಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಕ್ಷೇತ್ರದ ಮಂಜುನಾಥ ಸ್ವಾಮಿಯ ಛಾಯಾಚಿತ್ರ ಕ್ಲಿಕ್ಕಿಸಿ ಶ್ಯಾನುಭಾಗರು ರತ್ನವರ್ಮ ಹೆಗ್ಗಡೆಯವರ ಪ್ರಶಂಸೆಗೆ ಪಾತ್ರರಾಗಿದ್ದರು ಎನ್ನಲಾಗಿದೆ. ಕೊಲ್ಲೂರು, ಶೃಂಗೇರಿಯ ಶಾರದಾಂಬೆಯ ಚಿತ್ರಗಳನ್ನೂ ಮುದ್ರಿಸಿ ಅವರು ಗಮನ ಸೆಳೆದಿದ್ದರು. 1965ರಲ್ಲಿ ಮೂಡುಬಿದಿರೆಯಲ್ಲಿ ಅಜಂತಾ ಸ್ಟೂಡಿಯೋ , 1979ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಕಲರ್ ಲ್ಯಾಬ್, ಮೂಡುಬಿದಿರೆಯಲ್ಲಿ ಮೊದಲ ಡಿಜಿಟಲ್ ಸ್ಟೂಡಿಯೋ, ಹೀಗೆ 40x60 ಯಂತಹ ದೊಡ್ಟ ಪ್ರಿಂಟಿಂಗ್ ಕೆಲಸಗಳಲ್ಲಿ ಮೂಡುಬಿದಿರೆಯನ್ನು ಅವರು ಗುರುತಿಸುವಂತೆ ಮಾಡಿ ’ಛಾಯಾಗ್ರಾಹಕ ಭೀಷ್ಮ’ ಎನಿಸಿದ್ದರು.

ಅಖಿಲ ಭಾರತ ಛಾಯಾಗ್ರಾಹಕರ ಸಂಘದ ಸದಸ್ಯರಾಗಿದ್ದ ಅವರು ಮೂಡುಬಿದಿರೆ ವಲಯ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2015ರಲ್ಲಿ ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ಗೌರವ ಪುರಸ್ಕಾರಕ್ಕೂ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News