ಹಿರಿಯ ಪತ್ರಕರ್ತ ಬುಖಾರಿ ಹತ್ಯೆ ವಿರುದ್ಧ ಪ್ರತಿಭಟನೆ: ಸಂಪಾದಕೀಯ ವಿಭಾಗ ಖಾಲಿಬಿಟ್ಟ ಪತ್ರಿಕೆಗಳು

Update: 2018-06-19 16:34 GMT

ಶ್ರೀನಗರ, ಜೂ.19: ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಸುದ್ದಿಪತ್ರಿಕೆಗಳು ಸಂಪಾದಕೀಯ ವಿಭಾಗವನ್ನು ಖಾಲಿಬಿಡುವ ಮೂಲಕ ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯವರ ಹತ್ಯೆಗೆ ಪ್ರತಿಭಟನೆ ಸಲ್ಲಿಸಿವೆ.

‘ದಿ ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ ಬುಖಾರಿ ಹಾಗೂ ಅವರ ಭದ್ರತಾ ಅಧಿಕಾರಿಯನ್ನು ಅಪರಿಚಿತ ಬಂದೂಕುಧಾರಿಗಳು ಜೂನ್ 14ರಂದು ಶ್ರೀನಗರದಲ್ಲಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಈದ್ ಹಬ್ಬದ ಪ್ರಯುಕ್ತ ಎರಡು ದಿನದ ರಜೆ ಕಳೆದ ಬಳಿಕ ಮಂಗಳವಾರ ಪ್ರಕಟಗೊಂಡ ಪ್ರಮುಖ ಇಂಗ್ಲಿಷ್ ಪತ್ರಿಕೆಗಳಾದ ‘ಗ್ರೇಟರ್ ಕಾಶ್ಮೀರ್’, ‘ಕಾಶ್ಮೀರ್ ರೀಡರ್’, ಕಾಶ್ಮೀರ್ ಆಬ್ಸರ್ವರ್’ ಹಾಗೂ ಬುಖಾರಿಯವರು ಸಂಪಾದಕರಾಗಿದ್ದ ‘ದಿ ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕೀಯ ವಿಭಾಗವನ್ನು ಖಾಲಿ ಬಿಡಲಾಗಿದೆ.

‘ಡೈಲಿ ತಮ್ಲೀಲ್ ಇರ್ಷಾದ್’ ಮುಂತಾದ ಉರ್ದು ದಿನಪತ್ರಿಕೆಗಳೂ ಈ ಪ್ರತಿಭಟನಾ ಮಾರ್ಗವನ್ನು ಅನುಸರಿಸಿವೆ. ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಮಂಗಳವಾರದ ಸಂಚಿಕೆಯಲ್ಲಿ , ಬುಖಾರಿಯವರ ಹತ್ಯೆಯ ಕುರಿತು ಹಲವು ಲೇಖನಗಳಿವೆ. ಅಲ್ಲದೆ ಪತ್ರಿಕೆಯ ಪ್ರಧಾನ ಸಂಪಾದಕರ ಹತ್ಯೆಗೆ ಸಂತಾಪ ಸೂಚಿಸಿ ಸಂದೇಶ ಕಳುಹಿಸಿದ ಓದುಗರು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News