ಜನಸಾಮಾನ್ಯರ ಅವಕಾಶ ಕಸಿಯುತ್ತಿರುವ ವಂಶಪಾರಂಪರ್ಯ: ವರುಣ್ ಗಾಂಧಿ

Update: 2018-06-19 17:40 GMT

ಹೊಸದಿಲ್ಲಿ, ಜೂ.19: ರಾಜಕೀಯ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ವಂಶಪರಂಪರೆಯ ದೃಷ್ಟಿಕೋನದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇದರಿಂದ ಜನಸಾಮಾನ್ಯರಿಗೆ ಅವಕಾಶದ ಬಾಗಿಲು ಮುಚ್ಚಿದಂತಾಗುತ್ತದೆ ಎಂದಿದ್ದಾರೆ.

‘ದಿ ರೋಡ್ ಟು ಇಂಡಿಯಾಸ್ ಫ್ಯೂಚರ್: ಅಪರ್ಚುನಿಟೀಸ್ ಆ್ಯಂಡ್ ಚಾಲೆಂಜಸ್’ ಎಂಬ ವಿಷಯದ ಕುರಿತು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಸೋಮವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ರಾಜಕೀಯದಲ್ಲಿ ವಂಶಪರಂಪರೆಯ ನಿಲುವಿಗೆ ಪ್ರಾಶಸ್ತ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ರಾಜಕೀಯದಲ್ಲಿ ಹೆಚ್ಚಿನ ಮಂದಿಗೆ ಅವಕಾಶದ ಬಾಗಿಲು ತೆಗೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ವರುಣ್ ಗಾಂಧಿ, ಪ್ರತಿಯೊಂದು ದೇಶ, ರಾಜ್ಯ ಹಾಗೂ ಜಿಲ್ಲೆಯಲ್ಲೂ ಕೆಲವು ಗಣ್ಯ ಕುಟುಂಬಗಳಿರುತ್ತವೆ. ದುರದೃಷ್ಟಕರವಾಗಿದ್ದರೂ ಇದು ಸತ್ಯದ ವಿಷಯ ಎಂದರು. ಜನಸಾಮಾನ್ಯರಿಗೆ ಸಿನೆಮ ಉದ್ಯಮ, ಕ್ರೀಡಾ ಕ್ಷೇತ್ರ, ರಾಜಕೀಯ, ಕೈಗಾರಿಕೆ ಇತ್ಯಾದಿಗಳ ಬಾಗಿಲು ಮುಚ್ಚಿದೆ. ಸಣ್ಣ ನಗರವೊಂದರಲ್ಲಿ ವಾಸಿಸುತ್ತಿರುವ ಪ್ರತಿಭಾವಂತ ಯುವಜನತೆಯ ಪ್ರತಿಭಾ ವಿಕಸನಕ್ಕೆ ಅವಕಾಶವೇ ಇಲ್ಲದೆ ಹೋಗುವ ಪರಿಸ್ಥಿತಿ ಇರುವುದು ಬೇಸರದ ವಿಷಯವಾಗಿದೆ ಎಂದು ವರುಣ್ ಹೇಳಿದರು.

ಇದೇ ವೇಳೆ, ರಾಜಕೀಯ ಕ್ಷೇತ್ರದಲ್ಲಿ ತನ್ನ ಬೆಳವಣಿಗೆಗೆ ವಂಶಪರಂಪರೆ ಪ್ರಭಾವ ಬೀರಿದೆ ಎಂಬುದನ್ನು ಅವರು ಒಪ್ಪಿಕೊಂಡರು. ದೇಶದಲ್ಲಿ ಹೊಸ ಸಂಶೋಧನೆಗೆ ಆರ್ಥಿಕ ಅಡಚಣೆ ಎದುರಾಗುತ್ತಿದೆ ಎಂದ ಅವರು, ಚೀನಾವು ತನ್ನ ಜಿಡಿಪಿಯ ಶೇ.3ರಷ್ಟು ಪಾಲನ್ನು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಿದರೆ ಭಾರತದ ಪಾಲು ಕೇವಲ ಶೇ.0.6ರಷ್ಟು ಮಾತ್ರವಾಗಿದೆ. ಅಲ್ಲದೆ ದೇಶದಲ್ಲಿ ಹೊಸದಾಗಿ ಆರಂಭವಾಗುವ ಶೇ.93ರಷ್ಟು ಉದ್ದಿಮೆಗಳು ವಿಫಲವಾಗುತ್ತಿದ್ದು , ಉದ್ದಿಮೆ ಬೆಳೆಯಲು ಸಾಕಷ್ಟು ಸಮಯಾವಕಾಶವನ್ನು ಹಣ ಹೂಡಿರುವವರು (ಸಾಲ ನೀಡುವವರು) ನೀಡದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವರುಣ್ ಗಾಂಧಿ ಹೇಳಿದರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಿದ್ದು ಪಿಎಚ್‌ಡಿ ಸಂಶೋಧನೆಯು ಉದ್ದಿಮೆ ಮತ್ತು ಸಂಶೋಧನೆಯೊಂದಿಗೆ ಸಂಪರ್ಕ ಹೊಂದಿರಬೇಕು . ಅಲ್ಲದೆ ಶಿಕ್ಷಣವು ಸರ್ವರಿಗೂ ದೊರಕುವಂತೆ ಮಾಡುವ ಅಗತ್ಯವಿದೆ ಎಂದರು.

ಪರಿಸರ ಹಾನಿಯ ಬಗ್ಗೆ ಉಲ್ಲೇಖಿಸಿದ ವರುಣ್ ಗಾಂಧಿ, ದಿಲ್ಲಿಯ ಎರಡು ಸೆಟಿಲೈಟ್ ನಗರಗಳಾದ ಫರೀದಾಬಾದ್ ಹಾಗೂ ಗುರ್ಗಾಂವ್‌ಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಮುಚ್ಚಿದ ಬಳಿಕ ಈ ನಗರಗಳ ಬಹುತೇಕ ನಿವಾಸಿಗಳು ಗಂಭೀರ ಪ್ರಮಾಣದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News