ಕೇಂದ್ರದ ಯಾವುದೇ ಸಚಿವನಿಗೂ ಅರ್ಥಶಾಸ್ತ್ರ ಗೊತ್ತಿಲ್ಲ ಎಂದ ಸುಬ್ರಮಣಿಯನ್ ಸ್ವಾಮಿ

Update: 2018-06-20 10:43 GMT

ಹೊಸದಿಲ್ಲಿ, ಜೂ.20:  ಕೇಂದ್ರ ಸಚಿವ ಸಂಪುಟದಲ್ಲಿರುವ ಒಬ್ಬನೇ ಒಬ್ಬ ಸಚಿವನಿಗೆ ಅರ್ಥಶಾಸ್ತ್ರದ ಬಗ್ಗೆ ತಿಳಿದಿಲ್ಲ ಎಂದು ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಹೇಳಿದ್ದಾರೆ.

'ದಿ ಕ್ವಿಂಟ್' ವೆಬ್ ತಾಣಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಸ್ವಾಮಿ, ಅರ್ಥಶಾಸ್ತ್ರವನ್ನು ಅರ್ಥೈಸುವ ಸಾಮರ್ಥ್ಯವೂ  ಸಚಿವರಿಗಿಲ್ಲ ಎಂದರು. ಅದೇ ಸಮಯ ಆರ್ಥಿಕತೆಯ ಕ್ಷಿಷ್ಟತೆಗಳನ್ನು ಅರ್ಥ ಮಾಡಿಕೊಳ್ಳುವ ನಾಯಕರು ಯಾವ ಪಕ್ಷದಲ್ಲೂ ಇಲ್ಲ ಎಂದೂ ಸ್ವಾಮಿ ಹೇಳಿಕೊಂಡರು.

ಎರಡು ವರ್ಷಗಳ ಹಿಂದೆ ಅಂದಿನ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಹರಿಹಾಯ್ದಿದ್ದ ಸ್ವಾಮಿ ಅವರು 'ಮಾನಸಿಕವಾಗಿ ಸಂಪೂರ್ಣವಾಗಿ ಭಾರತೀಯರಲ್ಲ' ಹಾಗೂ ಉದ್ದೇಶಪೂರ್ವಕವಾಗಿ ಆರ್ಥಿಕತೆಯನ್ನು ಹಾಳು ಮಾಡಿದ್ದರೆಂದು ಆರೋಪಿಸಿದ್ದರು.

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಸ್ವಾಮಿ, "ರಘುರಾಮ್ ರಾಜನ್ ಅವರು ಬಡ್ಡಿ ದರ ಏರಿಸಿದ ಕಾರಣ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಷ್ಟವುಂಟಾಗಿತ್ತು. ಇದು ನಿರುದ್ಯೋಗ ಸೃಷ್ಟಿಸಿ ಆರ್ಥಿಕತೆಯನ್ನು ನಾಶಪಡಿಸುತ್ತಿತ್ತು. ಆದರೆ ಅವರಿಗದು ಅರ್ಥವಾಗಿರಲಿಲ್ಲ,'' ಎಂದರು. ಭಾರತದ ಬ್ಯಾಂಕುಗಳು ಕೂಡ ಕೆಟ್ಟ ಸ್ಥಿತಿಯಲ್ಲಿದ್ದು ಠೇವಣಿಗಳ ಪ್ರಮಾಣ ಹಿಂದೆಂದಿಗಿಂತಲೂ ಕಡಿಮೆಯಾಗಿದೆ ಎಂದು ಸ್ವಾಮಿ ಹೇಳಿದರು.

ಈ ಹಿಂದೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಸ್ವಾಮಿ, ದೇಶದ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಆದಾಯ ತೆರಿಗೆಯನ್ನು ರದ್ದ್ದುಗೊಳಿಸಬೇಕು ಎಂದರು. ಭಾರತಕ್ಕೆ ಚೀನಾವನ್ನು ಹಿಂದಿಕ್ಕುವ ಸಾಮರ್ಥ್ಯವಿದೆ. ಆದರೆ ಅದಕ್ಕೆ ತಕ್ಕುದಾದ ನೀತಿಗಳನ್ನು ಜಾರಿಗೊಳಿಸಬೇಕು ಎಂದರು. ಮೋದಿ ಸರಕಾರದ ವಿರುದ್ಧ ಹರಿಹಾಯ್ದ ಅವರು ದೇಶದ ವಿತ್ತ ಸಚಿವರ್ಯಾರು ಎಂಬ ಬಗ್ಗೆ ತಮಗೆ ಸಂಶಯವಿದೆ ಎಂದರು.

"ಆರ್ಥಿಕತೆಯ ನಿರ್ವಹಣೆಯ ಆಧಾರದಲ್ಲಿಯೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆಂದು ಮೋದಿ ತಿಳಿಯಬೇಕು, ನರಸಿಂಹ ರಾವ್ ಗೆ ಅದು ಸಾಧ್ಯವಾಗಿಲ್ಲ, ಮೊರಾರ್ಜಿ ದೇಸಾಯಿ ಅಥವಾ ವಾಜಪೇಯಿಗೂ ಸಾಧ್ಯವಾಗಿಲ್ಲ''ಎಂದು ಸ್ವಾಮಿ ಹೇಳಿದರು.

"ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮೋದಿಗೆ ಅರಿವಿದ್ದರೂ ಅವರು ತಪ್ಪಾದ ಸ್ನೇಹಿತರನ್ನು ಆಯ್ಕೆ ಮಾಡಿದ್ದಾರೆ. ಆದರೆ ಇವುಗಳನ್ನು ದಾಟಿ ಮುಂದಿನ ಅವಧಿಯಲ್ಲಿ ಅವರು ಉತ್ತಮ ಕೆಲಸ ನಿರ್ವಹಿಸಬಹುದು'' ಎಂಬ ಆಶಾವಾದವನ್ನೂ ಸ್ವಾಮಿ ವ್ಯಕ್ತಪಡಿಸಿದರು.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಮುರಿದು ಬಿದ್ದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ``ಮುಖ್ಯಮಂತ್ರಿ ಒಬ್ಬ ಹಿಂದೂವಾಗಿರಬೇಕಿತ್ತು'' ಎಂದರು. ಪ್ರಧಾನಿ ಮೋದಿಯ ನಂತರ ತಾನು ದೇಶದ ಅತ್ಯಂತ ಜನಪ್ರಿಯ ನಾಯಕ ಎಂದೂ ಸ್ವಾಮಿ ಹೇಳಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News