ದ.ಕ. ಜಿಲ್ಲಾ ಆಡಳಿತ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Update: 2018-06-21 07:22 GMT

ಮಂಗಳೂರು, ಜೂ. 21: ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳೂರಿನ  ಮಂಗಳಾ ಸ್ಟೇಡಿಯಂ ನ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ  ಯೋಗ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಟೆನ್ಷನ್ ರಹಿತ ಜೀವನಕ್ಕೆ ಯೋಗ ಪೂರಕ. ಋಷಿಮುನಿಗಳು ದೇಶಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಕೊಟ್ಟ ಕೊಡುಗೆ ಯೋಗ ಎಂದರು.

ಕಾನೂನಿನಿಂದ ಸಮಾಜ ಬದಲಾಗದು. ಜನಜಾಗೃತಿಯಿಂದ ಸಾಧ್ಯವಿದೆ. ಯೋಗ ಎಲ್ಲರನ್ನು ಒಟ್ಟು ಸೇರಿಸಬಲ್ಲುದು. ಜನಸಾಮಾನ್ಯರು ಆರೋಗ್ಯ ಕಾಯ್ದುಕೊಳ್ಳಲು ಯೋಗದಲ್ಲಿ ತೊಡಗಿಕೊಳ್ಳಬೇಕು ಎಂದು ಸಚಿವರು ನುಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಚಂಚಲ ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯಲು ಯೋಗ ಸಹಕಾರಿಯಾಗಬಲ್ಲುದು. ಅಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಯೋಗ ಪೂರಕವಾಗಿದೆ ಎಂದರು.

ಮನುಷ್ಯನ ಜೀವನ ಪದ್ಧತಿಯಲ್ಲೇ ಯೋಗವಿದೆ. ಹಿಂದೂಗಳು ದೇವರಲ್ಲಿ ಪಾರ್ಥನೆ ಮಾಡುವಾಗ, ಇಸ್ಲಾಂ ಧರ್ಮೀಯರು ನಮಾಝ್ ಮಾಡುವಾಗ, ಕ್ರೈಸ್ತರು ಪ್ರಾರ್ಥನೆ ಸಲ್ಲಿಸುವಾಗಲೂ ಯೋಗದ ಅಂಶಗಳನ್ನು ಗಮನಿಸಬಹುದು. ಯೋಗ ರಷಿಮುನಿಗಳ ಕಾಲದಿಂದಲೂ ನಮ್ಮೊಡನೆ ಬೆರೆತುಕೊಂಡು ಬಂದಿದೆ ಎಂದು ನಳಿನ್ ಕುಮಾರ್ ನುಡಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಯೋಗ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ದೈಹಿಕ ಸದೃಢತೆಯ ಜೊತೆಗೆ ಉತ್ತಮ ಆರೋಗ್ಯ ಯೋಗದಿಂದ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ದ.ಕ ಜಿ.ಪಂ ಸಿಇಒ ಡಾ. ಎಂ ಆರ್ .ರವಿ, ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ, ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಕುಮಾರ್  ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿ, ಹಿರಿಯ ಆಯುಷ್ ಅಧಿಕಾರಿ ಡಾ.ದೇವದಾಸ್ ಪುತ್ರನ್ ವಂದಿಸಿದರು. ಡಾ.ಶೋಭಾರಾಣಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಯೋಗ‌ ಗುರು ಗೋಪಾಲಕೃಷ್ಣ ದೇಲಂಪಾಡಿಯವರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ನೂರಾರು ಮಂದಿ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News