ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಕರಣದಿಂದ ಖುಲಾಸೆ ಕೋರಿರುವ ಪುರೋಹಿತ್ ಅರ್ಜಿ ವಿಚಾರಣೆಗೆ ಅಂಗೀಕಾರ
ಮುಂಬೈ,ಜೂ,22: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಿಂದ ತನ್ನನ್ನು ಮುಕ್ತಗೊಳಿಸಲು ತಿರಸ್ಕರಿಸಿರುವ ಹೈಕೋರ್ಟ್ ಮತ್ತು ವಿಶೇಷ ವಿಚಾರಣಾ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಪ್ರಶ್ನಿಸಿ ಪ್ರಮುಖ ಆರೋಪಿ ಲೆ.ಕ.ಪ್ರಸಾದ ಶ್ರೀಕಾಂತ ಪುರೋಹಿತ್ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಬಾಂಬೆ ಉಚ್ಚ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದೆ.
ಪ್ರಕರಣದಲ್ಲಿ ಪುರೋಹಿತ್ ವಿರುದ್ಧ ಕಾನೂನುಕ್ರಮಕ್ಕೆ ಅನುಮತಿ ನೀಡಿದ್ದ ಸರಕಾರದ ಆದೇಶವನ್ನು ರದ್ದುಗೊಳಿಸಲು ಹೈಕೋರ್ಟ್ 2017,ಡಿ.18ರಂದು ನಿರಾಕರಿಸಿತ್ತು. ಇದಕ್ಕೂ ಮುನ್ನ ವಿಶೇಷ ಎನ್‌ಐಎ ನ್ಯಾಯಾಲಯವು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲು ನಿರಾಕರಿಸಿತ್ತು.
ಬಳಿಕ ಪುರೋಹಿತ್ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು ಮತ್ತು ಅದರ ನಿರ್ದೇಶದಂತೆ ಈ ವರ್ಷದ ಆರಂಭದಲ್ಲಿ ಪುನಃ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ವಿರುದ್ಧ ಕಾನೂನು ಕ್ರಮಕ್ಕೆ ಸರಕಾರವು ಮಂಜೂರಾತಿ ನೀಡಿದ್ದು ಕಾನೂನಿನನ್ವಯ ತಪ್ಪಾಗಿದೆ ಎಂದು ಅವರು ವಾದಿಸಿದ್ದರು.
ಪುರೋಹಿತ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನೀಡಿರುವ ಮಂಜೂರಾತಿಯು ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಸಿಂಧುವಾಗಿಲ್ಲ ಎಂದು ಅವರ ಪರ ವಕೀಲರು ಪ್ರತಿಪಾದಿಸಿದ್ದಾರೆ.
ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿಗಳಾದ ರಣಜಿತ್ ಮೋರೆ ಮತ್ತು ಅನುಜಾ ಪ್ರಭುದೇಸಾಯಿ ಅವರ ಪೀಠವು ಜು.16ರಿಂದ ವಾದವಿವಾದಗಳನ್ನು ಆಲಿಸುವುದಾಗಿ ತಿಳಿಸಿತು.