×
Ad

ಕಾಶ್ಮೀರ ಕುರಿತು ಮುಷರ್ರಫ್ ಹೇಳಿಕೆಗೆ ಕಾಂಗ್ರೆಸ್ ನಾಯಕ ಸೋಝ್ ಬೆಂಬಲ: ಬಿಜೆಪಿ ಖಂಡನೆ

Update: 2018-06-22 19:43 IST

ಹೊಸದಿಲ್ಲಿ,ಜೂ.22: ಕಾಶ್ಮೀರಿಗಳ ಮೊದಲ ಆಯ್ಕೆಯು ಸ್ವಾತಂತ್ರ್ಯವಾಗಿದೆ ಎಂಬ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಝ್ ಮುಷರ್ರಫ್ ಅವರ ಹೇಳಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಝ್ ಅವರು ಬೆಂಬಲಿಸಿದ್ದು,ಇದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ಕಾಶ್ಮೀರಿಗಳಿಗೆ ತಮ್ಮಿಚ್ಛೆಯಂತೆ ನಡೆದುಕೊಳ್ಳಲು ಮುಕ್ತ ಅವಕಾಶ ನೀಡಿದರೆ ಅವರು ಸ್ವಾತಂತ್ರ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಮುಷರ್ರಫ್ ಹೇಳಿದ್ದರು. ವಾಸ್ತವದಲ್ಲಿ ಅವರ ಹೇಳಿಕೆ ಇಂದಿಗೂ ಸರಿಯಾಗಿದೆ ಎಂದು ಸೋಝ್ ‘ಕಾಶ್ಮೀರ:ಗ್ಲಿಂಪ್ಸ್‌ಸ್ ಆಫ್ ಹಿಸ್ಟರಿ ಆ್ಯಂಡ್ ದಿ ಸ್ಟೋರಿ ಆಫ್ ಸ್ಟ್ರಗಲ್’ನಲ್ಲಿ ಬರೆದಿದ್ದಾರೆ.

ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ವಿಲೀನವನ್ನು ಬಯಸುವುದಿಲ್ಲ,ಸ್ವಾತಂತ್ರ್ಯ ಅವರ ಮೊದಲ ಆಯ್ಕೆಯಾಗಲಿದೆ ಎಂದು ಮುಷರ್ರಫ್ ಹೇಳಿದ್ದರು. ಆ ಹೇಳಿಕೆ ಅಂದಿಗೂ ಇಂದಿಗೂ ಸತ್ಯವಾಗಿದೆ. ತಾನೂ ಅದನ್ನೇ ಹೇಳುತ್ತೇನೆ, ಆದರೆ ಅದು ಅಸಾಧ್ಯ ಎನ್ನುವುದು ತನಗೆ ಗೊತ್ತು ಎಂದು ಮಾಜಿ ಕೇಂದ್ರ ಸಚಿವರಾಗಿರುವ ಸೋಝ್ ಹೇಳಿದ್ದನ್ನು ಸುದ್ದಿಸಂಸ್ಥೆಯು ಶುಕ್ರವಾರ ಉಲ್ಲೇಖಿಸಿದೆ.

ಸೋಝ್ ಪಾಕಿಸ್ತಾನಕ್ಕೆ ಹೋಗುವುದು ಒಳ್ಳೆಯದು ಎಂದು ಹೇಳಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ,1991ರಲ್ಲಿ ಜೆಕೆಎಲ್‌ಎಫ್ ಸೋಝ್‌ರ ಪುತ್ರಿಯನ್ನು ಅಪಹರಿಸಿದ್ದಾಗ ಕೇಂದ್ರ ಸಚಿವರಾಗಿದ್ದ ಅವರು ಕೇಂದ್ರ ಸರಕಾರದ ಅಧಿಕಾರದ ಲಾಭವನ್ನು ಪಡೆದುಕೊಂಡಿದ್ದರು. ಇಂತಹವರಿಗೆ ನೆರವಾಗುವುದರಿಂದ ಉಪಯೋಗವಿಲ್ಲ. ಇಲ್ಲಿ ಉಳಿಯಲು ಬಯಸುವವರು ಸಂವಿಧಾನಕ್ಕೆ ಬದ್ಧರಾಗಿರಬೇಕು. ಅವರು ಮುಷರ್ರಫ್‌ರನ್ನು ಇಷ್ಟ ಪಡುತ್ತಾರಾದರೆ ಅವರಿಗೆ ಪಾಕಿಸ್ತಾನಕ್ಕೆ ‘ವನ್ ವೇ ಟಿಕೆಟ್’ನ್ನು ನಾವು ನೀಡುತ್ತೇವೆ ಎಂದು ಕುಟುಕಿದರು.

ಸೋಝ್‌ರ ಹೇಳಿಕೆಯನ್ನು ಹೊಣೆಗೇಡಿತನದ್ದು ಎಂದು ಹೇಳಿದ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು, ಕಾಶ್ಮೀರವೇ ಒಂದು ಮುಖ್ಯ ಸಮಸ್ಯೆಯಾಗಿದೆ. ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರು ಕಾಶ್ಮೀರದ ಬೆಳವಣಿಗೆ,ಅಭಿವೃದ್ಧಿ ಮತ್ತು ಶಾಂತಿಯನ್ನು ಕಿತ್ತುಕೊಂಡಿದ್ದಾರೆ. ಇಂತಹ ಶಕ್ತಿಗಳನ್ನು ವಿಫಲಗೊಳಿಸಲು ನಾವೆಲ್ಲ ಒಂದಾಗಬೇಕು. ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರಿಗೆ ಇಂಬು ನೀಡುವ ಇಂತಹ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದರು.

ಸೋಝ್ ಅವರ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ವಿವರಣೆ ನೀಡಬೇಕು ಎಂದು ಶಿವಸೇನೆಯು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News