×
Ad

ಶರಣಾಗಲು ನಿರಾಕರಿಸುವ ಉಗ್ರರನ್ನು ಸದೆಬಡಿಯುವುದು ದೈಹಿಕ ನೀತಿಯಲ್ಲ: ಜೇಟ್ಲಿ

Update: 2018-06-22 19:48 IST

ಹೊಸದಿಲ್ಲಿ, ಜೂ.22: ಕಾಂಗ್ರೆಸ್ ಹಾಗೂ ಮಾನವ ಹಕ್ಕು ಗುಂಪುಗಳ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಶರಣಾಗಲು ನಿರಾಕರಿಸುವ ಉಗ್ರರನ್ನು ಸದೆಬಡಿಯುವುದು ದೈಹಿಕ ನೀತಿಯಲ್ಲ, ಅದು ರಾಜಕೀಯ ಪರಿಹಾರಕ್ಕಾಗಿ ಕಾಯಲಾಗದ ಕಾನೂನು ಸುವ್ಯವಸ್ಥೆ ವಿಷಯ ಎಂದು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪುನಃ ದೈಹಿಕ ನೀತಿಯನ್ನು ಜಾರಿಗೆ ತರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದರು. ಒಮ್ಮೊಮ್ಮೆ ನಾವು ನಾವೇ ಸೃಷ್ಟಿಸಿರುವ ನಾಣ್ಣುಡಿಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇವೆ. ಅಂಥ ಒಂದು ನಾಣ್ಣುಡಿ, ಕಾಶ್ಮೀರದಲ್ಲಿ ದೈಹಿಕ ನೀತಿ ಎಂಬುದು. ಕೊಲೆಗಾರನ ನಿಭಾವಣೆ ಕೂಡಾ ಕಾನೂನು ಸುವ್ಯವಸ್ಥೆ ವಿಷಯವೆ. ಅದು ರಾಜಕೀಯ ಪರಿಹಾರಕ್ಕೆ ಕಾಯುವುದಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

ಫಿದಾಯಿ ಸಾಯಲು ಸಿದ್ಧವಿರುತ್ತಾನೆ. ಆತ ಕೊಲ್ಲಲೂ ಸಿದ್ಧವಿರುತ್ತಾನೆ. ಆತನ ಮುಂದೆ ಸತ್ಯಾಗ್ರಹ ನಡೆಸುವ ಮೂಲಕ ಆತನನ್ನು ದಾರಿಗೆ ತರಬೇಕೇ?, ಆತ ಕೊಲ್ಲಲೆಂದೇ ಬರುವಾಗ ನಮ್ಮ ಭದ್ರತಾ ಪಡೆಗಳು, ತಮ್ಮ ಜೊತೆ ಕುಳಿತು ಮಾತನಾಡಿ ಎಂದು ಕೇಳಿಕೊಳ್ಳಬೇಕೇ? ಎಂದು ಜೇಟ್ಲಿ ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ. ಕೆಲದಿನಗಳ ಹಿಂದೆ ಬಿಜೆಪಿ ಕಣಿವೆ ರಾಜ್ಯದಲ್ಲಿ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ರಚಿಸಿದ್ದ ಸರಕಾರದಿಂದ ಹೊರಬರುವ ಮೂಲಕ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು. ರಾಜೀನಾಮೆ ನೀಡುವ ವೇಳೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಜಮ್ಮು ಮತ್ತು ಕಾಶ್ಮೀರದಲ್ಲಿ ದೈಹಿಕ ನೀತಿ ಕೆಲಸ ಮಾಡುವುದಿಲ್ಲ. ಸಮನ್ವಯವೇ ಇಲ್ಲಿ ಮುಖ್ಯ ಎಂದು ತಿಳಿಸಿದ್ದರು.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಜೇಟ್ಲಿ, ಕಣಿವೆಯ ಸಾಮಾನ್ಯ ಜನರನ್ನು ರಕ್ಷಿಸುವುದು, ಅವರಿಗೆ ಭಯೋತ್ಪಾದನೆಯಿಂದ ಮುಕ್ತಿ ಒದಗಿಸುವುದು ಮತ್ತು ಅವರಿಗೆ ಉತ್ತಮ ಜೀವನ ಮತ್ತು ವಾತಾವರಣವನ್ನು ಕಲ್ಪಿಸುವುದೇ ಮುಖ್ಯ ನೀತಿಯಾಗಬೇಕು ಎಂದು ತಿಳಿಸಿದ್ದಾರೆ. ಮಾನವ ಹಕ್ಕುಗಳ ಸಂಘಟನೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಜೇಟ್ಲಿ, ಈ ಸಂಘಟನೆಗಳು ಹಿಂಸೆಯಿಂದ ಸಂತ್ರಸ್ತರಾಗಿರುವ ಮುಗ್ಧ ಜನರು ಮಾನವ ಹಕ್ಕು ವಂಚಿತರಾಗಿರುವ ಬಗ್ಗೆ ಏನೂ ಹೇಳುವುದಿಲ್ಲ. ನಮ್ಮ ಭದ್ರತಾ ಸಿಬ್ಬಂದಿ ಉಗ್ರರ ದಾಳಿಯಲ್ಲಿ ಹುತಾತ್ಮರಾಗುವಾಗ ಇವರ ಕಣ್ಣಲ್ಲಿ ಒಂದು ಹನಿ ನೀರೂ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News