ಬಿಜೆಪಿ ಜೊತೆ ಸಂಬಂಧವಿರುವ ಬ್ಯಾಂಕ್‌ಗಳಲ್ಲಿ 5 ದಿನಗಳಲ್ಲಿ 3,118 ಕೋಟಿ ರೂ. ಜಮೆ: ಕಾಂಗ್ರೆಸ್

Update: 2018-06-22 15:04 GMT

ಹೊಸದಿಲ್ಲಿ, ಜೂ.22: ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿದ ನಿರ್ಧಾರ ಪ್ರಕಟಿಸಿದ ಐದು ದಿನಗಳೊಳಗೆ ಬಿಜೆಪಿ ಜೊತೆ ಸಂಬಂಧ ಹೊಂದಿರುವ ಗುಜರಾತ್‌ನ 11 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಡಿಸಿಬಿ)ಗಳಲ್ಲಿ ಅಮಾನ್ಯಗೊಂಡ 3,118.51 ಕೋಟಿ ರೂ. ಮೊತ್ತದ ಕರೆನ್ಸಿ ನೋಟುಗಳನ್ನು ಜಮೆ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ತಿಳಿಸಿದೆ.

“ನೋಟು ಅಮಾನ್ಯ ಪ್ರಕ್ರಿಯೆ ಎಂಬುದು ಬಿಜೆಪಿ ಅಕ್ರಮವಾಗಿ ಕೂಡಿಹಾಕಿದ ಕಪ್ಪು ಹಣವನ್ನು ಬಿಳಿ ಮಾಡುವ ಉದ್ದೇಶವಿದ್ದ ಸ್ವತಂತ್ರ ಭಾರತದ ಅತೀ ದೊಡ್ಡ ಹಗರಣ ಎಂಬುದು ಇದೀಗ ಅಧಿಕೃತವಾಗಿ ಸಾಬೀತಾಗಿದೆ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.

 ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ಬಸವಳಿದರೆ ಹಗರಣಕರ್ತರು ತಮ್ಮ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವಲ್ಲಿ ಸಫಲರಾದರು ಎಂದು ಟೀಕಿಸಿದ್ದಾರೆ. ನೋಟು ನಿಷೇಧವನ್ನು ಪ್ರಧಾನಿ ಮೋದಿ ನಿರೂಪಿಸಿದರು. ಇದು ಕಪ್ಪುಹಣದ ಕುಳಗಳಿಗೆ ಅನುಕೂಲವಾಯಿತು. 19 ತಿಂಗಳ ಮೋದಿ ಪ್ರೇರಿತ ವಿಪತ್ತಿನ ಬಳಿಕ ಈಗ ನೋಟು ನಿಷೇಧದ ಉದ್ದೇಶ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉತ್ತರಿಸುವ ಕಾಲ ಈಗ ಕೂಡಿಬಂದಿದೆ. ಅಮಿತ್ ಶಾ, ಬಿಜೆಪಿ ಸಂಸದರು ಹಾಗೂ ಸಚಿವರ ವಿರುದ್ಧ ಮೋದಿ ತನಿಖೆ ನಡೆಸುವರೇ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಮನೋರಂಜನ್ ಎಸ್. ರಾಯ್ ಅವರು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ನಬಾರ್ಡ್‌ನ ಮೇಲ್ಮನವಿ ಪ್ರಾಧಿಕಾರ ಹಾಗೂ ಮುಖ್ಯ ಜನರಲ್ ಮ್ಯಾನೇಜರ್ ಒದಗಿಸಿದ ಮಾಹಿತಿಯಾಧರಿಸಿ ‘ದಿ ಇಂಡೋ-ಏಶಿಯನ್ ನ್ಯೂಸ್ ಸರ್ವಿಸ್ (ಐಎಎನ್‌ಎಸ್)’ ಗುರುವಾರ ವರದಿ ಪ್ರಕಟಿಸಿತ್ತು.

 2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧವನ್ನು ಘೋಷಿಸಿದ ಐದು ದಿನದೊಳಗೆ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ (ಎಡಿಸಿಬಿ) 745.59 ಕೋಟಿ ರೂ. ನಿಷೇಧಿತ ನೋಟನ್ನು ಸ್ವೀಕರಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ 2000ದಲ್ಲಿ ಈ ಬ್ಯಾಂಕ್‌ನ ಅಧ್ಯಕ್ಷರಾಗಿದ್ದು ಮುಂದಿನ ಹಲವು ವರ್ಷಗಳ ಕಾಲ ಬ್ಯಾಂಕ್‌ನ ನಿರ್ದೇಶಕರಾಗಿ ಮುಂದುವರಿದಿದ್ದರು. ಎಡಿಸಿಬಿಯ ನಂತರ ರಾಜ್‌ಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ 693.19 ಕೋಟಿ ರೂ. ನಿಷೇಧಿತ ನೋಟುಗಳನ್ನು ಸ್ವೀಕರಿಸಿದೆ. ಇದರ ಅಧ್ಯಕ್ಷರಾಗಿರುವ ಜಯೇಶ್ ಭಾ ವಿಟ್ಠಲ್‌ಭಾ ರದಾದಿಯ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಸಂಪುಟದ ಸಚಿವ. ಇದೇ ವೇಳೆ ಗುಜರಾತ್ ರಾಜ್ಯ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 1.11 ಕೋಟಿ ರೂ. ಮೊತ್ತದ ನಿಷೇಧಿತ ನೋಟುಗಳನ್ನು ಜಮೆ ಮಾಡಲಾಗಿದೆ. ನೋಟು ನಿಷೇಧ ಜಾರಿಗೊಳಿಸಿದ ಐದು ದಿನಗಳ ಬಳಿಕ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ನಿಷೇಧಿತ ನೋಟುಗಳನ್ನು ಜಮೆ ಮಾಡುವುದನ್ನು ನಿಷೇಧಿಸಲಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ ಎಂದು ಐಎಎನ್‌ಎಸ್ ತಿಳಿಸಿದೆ.

 ಸೂರತ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಬರ್ಕಾಂತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸೇರಿದಂತೆ ಇತರ 9 ಬ್ಯಾಂಕ್‌ಗಳನ್ನು ಕಾಂಗ್ರೆಸ್‌ನ ಹೇಳಿಕೆಯಲ್ಲಿ ಹೆಸರಿಸಲಾಗಿದೆ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೋಲಿಸಿದರೆ ಬಿಜೆಪಿ ಮತ್ತದರ ಮಿತ್ರಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ ಜಮೆ ಮಾಡಿರುವ ವಿಷಯದಲ್ಲಿ ಬೃಹತ್ ಪಾಲು ಪಡೆದುಕೊಂಡಿವೆ(22,270 ಕೋಟಿ ರೂ.ಗಳಲ್ಲಿ 14,293.71 ಕೋಟಿ ರೂ.) ಎಂದು ಕಾಂಗ್ರೆಸ್ ತಿಳಿಸಿದೆ. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಲ್ಲಿ 17 ಲಕ್ಷ ಖಾತೆಗಳಿವೆ. ಆದರೆ ಕೇವಲ 1.60 ಲಕ್ಷ ಗ್ರಾಹಕರು ಮಾತ್ರ ಹಣ ಜಮೆ ಹಾಗೂ ವಿನಿಮಯ ಮಾಡಿದ್ದಾರೆ. ಇದು ಒಟ್ಟು ಠೇವಣಿ ಖಾತೆಯ ಕೇವಲ ಶೇ.9.37 ಪ್ರಮಾಣವಾಗಿದೆ ಎಂದು ನಬಾರ್ಡ್ ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಕೇವಲ ಶೇ.0.09ರಷ್ಟು ಖಾತೆಗಳಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತ ಜಮೆ ಮಾಡಲಾಗಿದೆ. ಅತ್ಯಧಿಕ ನಿಷೇಧಿತ ನೋಟು ಜಮೆಯಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಪೈಕಿ ಮಹಾರಾಷ್ಟ್ರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದ್ದರೆ ದ್ವಿತೀಯ ಸ್ಥಾನದಲ್ಲಿ ಗುಜರಾತ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು, ತೃತೀಯ ಸ್ಥಾನದಲ್ಲಿ ಕೇರಳ ಡಿಸಿಬಿಗಳಿವೆ ಎಂದು ನಬಾರ್ಡ್ ವರದಿ ತಿಳಿಸಿದೆ.

ಪ್ರಥಮ ಸ್ಥಾನ ಪಡೆದ ಶಾಗೆ ಅಭಿನಂದನೆಗಳು: ರಾಹುಲ್

“ಹಳೆಯ ನೋಟುಗಳನ್ನು ಹೊಸ ನೋಟಿಗೆ ಬದಲಾಯಿಸುವ ಓಟದ ಸ್ಪರ್ಧೆಯಲ್ಲಿ 5 ದಿನದಲ್ಲಿ 750 ಕೋಟಿ ರೂ. ಗಡಿ ತಲುಪಿದ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಮಿತ್ ಶಾರಿಗೆ ಅಭಿನಂದನೆಗಳು.”

“ನೋಟು ನಿಷೇಧದಿಂದ ಮಿಲಿಯಾಂತರ ಭಾರತೀಯರ ಜೀವನ ನಾಶವಾಗಿದೆ. ನಿಮ್ಮ ಸಾಧನೆಗೆ ವಂದಿಸುತ್ತೇನೆ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅಮಿತ್ ಶಾರ ಫೋಟೋ ಹಾಗೂ ‘ಶಾ ಝಾದಾ ಖಾ ಗಯಾ’ (ಶಾ ಹೆಚ್ಚು ತಿಂದುಬಿಟ್ಟರು) ಎಂದು ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News