6 ವರ್ಷದ ಬಾಲಕಿಯ ಅತ್ಯಾಚಾರಗೈದು ಹತ್ಯೆ

Update: 2018-06-22 16:32 GMT

ಗ್ವಾಲಿಯರ್, ಜೂ. 22: ನಾಲ್ಕು ತಿಂಗಳ ಬಾಲಕಿಯ ಬರ್ಬರ ಅತ್ಯಾಚಾರ ಹಾಗೂ ಹತ್ಯೆಯ ಬಳಿಕ, ಗ್ವಾಲಿಯರ್ ನ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ 6 ವರ್ಷದ ಬಾಲಕಿಯ ಛಿದ್ರಗೊಂಡ ಮೃತದೇಹ ಪತ್ತೆಯಾಗಿದೆ.

ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡ ಬಾಲಕಿಯನ್ನು ಐಸ್‌ಕ್ರೀಮ್ ನೀಡುವುದಾಗಿ ಆಮಿಷ ತೋರಿಸಿ ವ್ಯಕ್ತಿ ಕರೆದೊಯ್ದಿದ್ದಾನೆ. ಈ ಘಟನೆ ಬುಧವಾರ ಹಾಗೂ ಗುರುವಾರ ನಡುವೆ ರಾತ್ರಿ ಸಂಭವಿಸಿದೆ. ಈ ಘಟನೆಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ವ್ಯಕ್ತಿಯ ಉದ್ದೇಶ ಅರಿತು ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು, ವ್ಯಕ್ತಿ ಬಾಲಕಿಯನ್ನು ಮನವೊಲಿಸಲು ಪ್ರಯತ್ನಿಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಪುತ್ರಿ ನಾಪತ್ತೆಯಾಗಿರುವ ಬಗ್ಗೆ ಅರಿತ ಹೆತ್ತವರು ಬೊಬ್ಬೆ ಹಾಕಿದ್ದಾರೆ. ಕೂಡಲೇ ಕಂಪೂ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಕುಟುಂಬ ಹುಡುಕಾಡಿದಾಗ ಬಾಲಕಿಯ ಮೃತದೇಹ ಅಮ್‌ಖೋರ್ ಪ್ರದೇಶದಲ್ಲಿ ಪತ್ತೆಯಾಯಿತು. ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಹಾಗೂ ಆಕೆಯ ಗುರುತು ಸಿಗಬಾರದೆಂದು ಮುಖವನ್ನು ಕಲ್ಲಿನಿಂದ ಜಜ್ಜಲಾಗಿದೆ ಎಂದು ವೈದ್ಯರ ಮರಣೋತ್ತರ ಪರೀಕ್ಷೆ ತಿಳಿಸಿದೆ. ಪೊಲೀಸರು ಅಪರಿಚಿತ ದುಷ್ಕರ್ಮಿ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News