ಪಿಣರಾಯಿ ವಿಜಯನ್‌ಗೆ 4ನೇ ಬಾರಿಯೂ ಪ್ರಧಾನಿ ಭೇಟಿಗೆ ಅವಕಾಶ ನಿರಾಕರಣೆ

Update: 2018-06-22 16:34 GMT

ಹೊಸದಿಲ್ಲಿ, ಜೂ. 21: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸರ್ವ ಪಕ್ಷ ನಿಯೋಗಕ್ಕೆ ನಾಲ್ಕನೇ ಬಾರಿಯೂ ಅವಕಾಶ ನಿರಾಕರಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಸರ್ವಪಕ್ಷಗಳ ನಿಯೋಗಕ್ಕೆ ಭೇಟಿ ಅವಕಾಶ ನಿರಾಕರಿಸಿ ಪ್ರಧಾನಿ ಮಂತ್ರಿ ಅವರ ಕಚೇರಿ ಗುರುವಾರ ಮಾಹಿತಿ ನೀಡಿದೆ ಎಂದು ಪಿಣರಾಯಿ ವಿಜಯನ್ ಅವರ ಕಚೇರಿಯ ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಪಡಿತರ ಮಂಜೂರಿನಲ್ಲಿ ಅಸಮಾನತೆ ಕುರಿತು ಚರ್ಚೆ ನಡೆಸಲು ಸರ್ವ ಪಕ್ಷಗಳ ನಿಯೋಗ ಪ್ರದಾನಿ ಅವರನ್ನು ಭೇಟಿಯಾಗಲು ಯೋಜಿಸಿತ್ತು. ಅಗತ್ಯವಿದ್ದರೆ ಮುಖ್ಯಮಂತ್ರಿ ಅವರು ಕೇಂದ್ರ ಆಹಾರ ಮತ್ತು ವಿತರಣೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿಯಾಗಬಹುದು ಎಂದು ಹೇಳಿ ಪ್ರಧಾನ ಮಂತ್ರಿ ಕಚೇರಿ ಮನವಿಗೆ ಪ್ರತಿಕ್ರಿಯೆ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಕಳೆದ ವಾರ ಕೂಡ ವಿಜಯನ್ ಅವರು ಪ್ರಧಾನಿ ಅವರ ಭೇಟಿಗೆ ಅವಕಾಶ ಕೋರಿದ್ದರು. ರಾಜ್ಯಕ್ಕೆ ಬಜೆಟ್ ಮಂಜೂರು ಕುರಿತು ವೌಲ್ಯಮಾಪನ ಮಾಡಲು ಮುಖ್ಯಮಂತ್ರಿ ಅವರ ಕಚೇರಿ 2017 ಮಾರ್ಚ್ 20ರಂದು ಪ್ರಧಾನಿ ಅವರನ್ನು ಭೇಟಿಯಾಗಲು ಬಯಸಿತ್ತು. ನಗದು ನಿಷೇಧ ಘೋಷಿಸಿದ ವಾರಗಳ ಬಳಿಕ ಅಂದರೆ 2016 ನವೆಂಬರ್ 24ರಂದು ಕೂಡ ವಿಜಯನ್ ಅವರು ಇದೇ ವಿಷಯದ ಕುರಿತು ಚರ್ಚೆ ನಡೆಸಲು ಪ್ರಧಾನಿ ಅವರ ಭೇಟಿ ಅವಕಾಶ ಕೋರಿದ್ದರು. ಪ್ರಸ್ತುತ ಮುಖ್ಯಮಂತ್ರಿ ವಿಜಯನ್ ಅವರು ಸಿಪಿಎಂ ಕೇಂದ್ರ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News