ಮಲ್ಯನನ್ನು ‘ಪರಾರಿಯಾದ ಅಪರಾಧಿ’ ಎಂದು ಘೋಷಿಸಲು ಆಗ್ರಹ

Update: 2018-06-22 16:37 GMT

 ಹೊಸದಿಲ್ಲಿ, ಜೂ. 21: ಬ್ಯಾಂಕ್‌ಗಳಿಗೆ ದೊಡ್ಡ ಮೊತ್ತದ ಸಾಲ ಉಳಿಸಿರುವವರ ವಿರುದ್ಧ ನೂತನ ಕಾನೂನು ಅಡಿಯಲ್ಲಿ ಭಾರತ ಶುಕ್ರವಾರ ತನ್ನ ಮೊದಲ ಅಧಿಕೃತ ಕ್ರಮ ಕೈಗೊಂಡಿದ್ದು, ಮದ್ಯದ ದೊರೆ ವಿಜಯ ಮಲ್ಯ ಅವರನ್ನು ‘ಪರಾರಿಯಾದ ಅಪರಾಧಿ’ ಎಂದು ಘೋಷಿಸುವಂತೆ ಹಾಗೂ ಅವರ 12,500 ಕೋ. ರೂ. ಆಸ್ತಿಯನ್ನು ವಶಪಡಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ಸಾಲ ಉಳಿಸಿ ಪರಾರಿಯಾದವರ ಎಲ್ಲ ಸೊತ್ತುಗಳನ್ನು ವಶಪಡಿಸಿಕೊಳ್ಳುವ ಅವಕಾಶ ನೀಡುವ, ಇತ್ತೀಚೆಗೆ ಜಾರಿಗೆ ತರಲಾದ ‘ಪರಾರಿಯಾದ ಆರ್ಥಿಕ ಅಪರಾಧಿಗಳ ಆಧ್ಯಾದೇಶ’ದ ಅಡಿಯಲ್ಲಿ ಮುಂಬೈ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮಲ್ಯ ಹಾಗೂ ಅವರ ಕಂಪೆನಿಗಳ ಸ್ಥಿರ ಹಾಗೂ ಚರ 12,500 ಕೋ. ರೂ. ಸೊತ್ತುಗಳನ್ನು ಕೂಡಲೇ ವಶಪಡಿಸಿಕೊಳ್ಳಲು ಅನುಮತಿ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. ನ್ಯಾಯಾಲಯ ಮಲ್ಯನನ್ನು ‘ಪರಾರಿಯಾದ ಅಪರಾಧಿ’ ಎಂದು ಘೋಷಿಸಲು ಈ ಹಿಂದೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ತನ್ನ ಎರಡು ಆರೋಪ ಪಟ್ಟಿಯಲ್ಲಿ ಸಾಕ್ಷಿಗಳನ್ನು ಸಲ್ಲಿಸಿತ್ತು.

ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯ ಕಾನೂನು ಪ್ರಕ್ರಿಯೆಯಲ್ಲಿ ವಿಚಾರಣೆ ಮುಗಿದ ಬಳಿಕ ಮಾತ್ರ ಜಾರಿ ನಿರ್ದೇಶನಾಲಯ ಸೊತ್ತನ್ನು ವಶಪಡಿಸಿಕೊಳ್ಳಬಹುದು. ಅದಕ್ಕೆ ಹಲವು ವರ್ಷಗಳೇ ಬೇಕಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News