ಗಿನ್ನೆಸ್ ದಾಖಲೆಗೆ ಸಿದ್ಧತೆ ನಡೆಸಿದೆ ತುಳು ಚಿತ್ರರಂಗ!

Update: 2018-06-23 10:24 GMT

ಮಂಗಳೂರು, ಜೂ.23: ತುಳು ಸಿನೆಮಾ ರಂಗವು ಇದೀಗ ಗಿನ್ನೆಸ್ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಿದ್ದು, 17 ಗಂಟೆಗಳಲ್ಲಿ 10 ನಿರ್ದೇಶಕರಿಂದ ಚಲನಚಿತ್ರವೊಂದರ ಚಿತ್ರೀಕರಣವೊಂದಕ್ಕೆ ಮುಂದಾಗಿದೆ. ಚಿತ್ರದ ನಾಮಕರಣವನ್ನು ಇನ್ನಷ್ಟೇ ಘೋಷಿಸಬೇಕಿದ್ದು, ಚಿತ್ರದಲ್ಲಿ 10 ನಾಯಕ ನಟರು ಅಭಿನಯಿಸಲಿದ್ದಾರೆ. ವಿಶೇಷವೆಂದರೆ ತುಳು ಚಿತ್ರರಂಗ ಕ್ಷೇತ್ರದ ದಿಗ್ಗಜರು, ನಟರ ನಡುವೆ, ಚಿತ್ರದಲ್ಲಿ ತುಮಿಳಿನ ಖ್ಯಾತ ಖಳನಾಯಕ ಪಾತ್ರಧಾರಿ ಪುಲಿಕುಟ್ಟಿ ಚಿತ್ರ ಖ್ಯಾತಿಯ ರಾಜಸಿಂಹ ಖಳನಾಯಕನಾಗಿ ನಟಿಸಲಿದ್ದಾರೆ ಎಂದು ನಟ ಸೌರಭ್ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ನಾಗೇಶ್ವರ ಸಿನಿ ಕಂಬೈನ್ಸ್ ಸಂಸ್ಥೆಯಿಂದ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ ನೇತೃತ್ವದಲ್ಲಿ ನಿರ್ಮಾಣವಾಗಲಿರುವ ಈ ಚಿತ್ರ ತುಳುವಿನ ಪ್ರಥಮ ಮಲ್ಟಿಸ್ಟಾರ್ ಚಿತ್ರವಾಗಲಿದೆ. ಚಿತ್ರಕ್ಕೆ 10ಕ್ಕೂ ಅಧಿಕ ಕ್ಯಾಮರಾಗಳು ಬಳಕೆಯಾಗಲಿದ್ದು, ಏಕಕಾಲದಲ್ಲಿ 10 ಲೊಕೇಶನ್‌ಗಳಲ್ಲಿ ಚಿತ್ರ ಗರಿಷ್ಠ 17 ಗಂಟೆಯೊಳಗೆ ಚಿತ್ರೀಕರಣ ನಡೆಸಲಿದೆ ಎಂದು ಅವರು ಹೇಳಿದರು.

ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನ ಹರೀಶ್ ಕೊಟ್ಪಾಡಿಯವರದ್ದಾಗಿದ್ದು, ಖ್ಯಾತ ನಿರ್ದೇಶಕರಾದ ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಪ್ರಕಾಶ್ ಪಾಂಡೇಶ್ವರ, ಮಯೂರ್ ಶೆಟ್ಟಿ, ರಂಜಿತ್ ಸುವರ್ಣ, ರಾಜ್ ಕಮಲ್, ರಿತೇಶ್ ಬಂಗೇರ, ರಘು ಶೆಟ್ಟಿ ಚಿತ್ರವನ್ನು ನಿರ್ದೇಶಲಿದ್ದಾರೆ. ಈ ಚಿತ್ರದಲ್ಲಿ ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್, ತೌಳಭ ಸ್ಟಾರ್ ಸೌರಭ್ ಭಂಡಾರಿ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್, ಅಸ್ತಿಕ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸಲಿದ್ದಾರೆ.

ಉಳಿದ ನಿರ್ದೇಶಕರು ಹಾಗೂ ನಾಯಕ ನಟರ ಜತೆ ಮಾತುಕತೆ ನಡೆಯುತ್ತಿದ್ದು, ನಟಿಯಾಗಿ ಸದ್ಯ ಪೂಜಾ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಇತರ ನಾಯಕಿಯರನ್ನು ಸನ್ನಿವೇಶಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಕಡಂದಲೆ ಸುರೇಶ್ ಭಂಡಾರಿ ತಿಳಿಸಿದರು.

ಕನ್ನಡದಲ್ಲಿ ಈಗಾಗಲೇ 18 ಗಂಟೆಗಳಲ್ಲಿ ಚಿತ್ರವೊಂದು ಚಿತ್ರೀಕರಣಗೊಂಡ ದಾಖಲೆಯಿದೆ. ಇದೀಗ ತುಳುವಿನಲ್ಲಿ 17 ಗಂಟೆಗಳಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸ ವಿಚಾರ. ಸೆಪ್ಟಂಬರ್ 8 ಎಂಬ ಚಿತ್ರವನ್ನು 24 ಗಂಟೆಗಳಲ್ಲಿ ನಿರ್ಮಿಸಲಾಗಿತ್ತು ಎಂದು ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಟ ಅರ್ಜುನ್ ಕಾಪಿಕಾಡ್, ನಟಿ ಪೂಜಾ ಶೆಟ್ಟಿ, ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ, ರಾಜೇಶ್ ಬ್ರಹ್ಮಾವರ, ಅವಿನಾಶ್, ಪಮ್ಮಿ ಕೊಡಿಯಾಲ್‌ಬೈಲ್ ಹಾಗೂ ಇತರರು ಉಪಸ್ಥಿತರಿದ್ದರು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News