ಬಂದರ್‌ನ ಮೀನುಗಾರಿಕಾ ಜಟ್ಟಿ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಕೇಂದ್ರ ಸರಕಾರ ಕಾರಣ: ಜೆ.ಆರ್.ಲೋಬೊ

Update: 2018-06-23 10:29 GMT

ಮಂಗಳೂರು, ಜೂ.23: ನಗರದ ಬಂದರಿನ 3ನೆ ಹಂತದ ಮೀನುಗಾರಿಕಾ ಜಟ್ಟಿ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬೀಳಲು ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಶಿಲಾನ್ಯಾಸಗೊಂಡ ಈ ಜಟ್ಟಿ ಅಭಿವೃದ್ಧಿ ಕಾಮಗಾರಿ 2015ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದ ನಡುವಿನ ತಿಕ್ಕಾಟ ಎಂಬಿತ್ಯಾದಿ ವರದಿ, ಹೇಳಿಕೆಗಳು ತಪ್ಪು ಮಾಹಿತಿ ಎಂದು ಹೇಳಿದರು.

3ನೆ ಹಂತದ ಮೀನುಗಾರಿಕಾ ಜಟ್ಟಿ ಅಭಿವೃದ್ಧಿಗೆ ಒಟ್ಟು 57.60 ಕೋಟಿ ರೂ. ಅಂದಾಜು ಪಟ್ಟಿ ಮಂಜೂರಾಗಿ ಕೇಂದ್ರ ಸರಕಾರದ ಪಾಲು 43.20 ಕೋಟಿ ರೂ. ಮತ್ತು ರಾಜ್ಯ ಸರಕಾರದ 14.40 ಕೋಟಿ ರೂ. ನಿಗದಿಪಡಿಸಲಾಗಿತ್ತು. 2010ರ ಅಕ್ಟೋಬರ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಈ ಯೋಜನೆಗೆ ಮಂಜೂರಾತಿ ದೊರಕಿತ್ತು. ಬಳಿಕ ಯೋಜನೆ ಬಗ್ಗೆ ಸ್ಥಳೀಯ ಕೆಲವರು ಹಸಿರು ಪೀಠದಲ್ಲಿ ಪ್ರಕರಣ ದಾಖಲಿಸಿದ್ದ ಕಾರಣ ಯೋಜನೆ ಅರ್ಧದಲ್ಲಿ ನಿಂತು ಹೋಯಿತು. ಬಳಿಕ ಹಸಿರು ಪೀಠವು ಸುಮಾರು 2017ರಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿತು. ಬಳಿಕ ಯೋಜನೆಗೆ ಪರಿಷ್ಕೃತ ಅಂದಾಜು ಪಟ್ಟಿ 98.26 ಕೋಟಿ ರೂ. ತಯಾರಿಸಿ ಮಂಜೂರಾತಿಗೆ ಕಳುಹಿಸಲಾಯಿತು. ಈಗಾಗಲೇ ಈ ಯೋಜನೆಗೆ 51.89 ಕೋಟಿ ರೂ. ಖರ್ಚಾಗಿದ್ದು, ಇದರ ಪೈಕಿ 38.89 ಕೋಟಿ ರೂ. ರಾಜ್ಯ ಸರಕಾರ ಭರಿಸಿದೆ. ಕೇಂದ್ರ ಸರಕಾರವು 43.20 ಕೋಟಿ ರೂ.ಗಳನ್ನು ಭರಿಸಬೇಕಿದೆ. ಆದರೆ ಕೇಂದ್ರ ಸರಕಾರ ಕೇವಲ 13 ಕೋಟಿ ರೂ. ಮಾತ್ರ ನೀಡಿದೆ. ಈ ಬಗ್ಗೆ ಹಿಂದಿನ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ 8 ಬಾರಿ ಹೊಸದಿಲ್ಲಿಗೆ ತೆರಳಿ ಕೇಂದ್ರ ಸರಕಾರಕ್ಕೆ ಅನುದಾನಕ್ಕಾಗಿ ಮನವಿ ಮಾಡಿದ್ದರೂ ಸ್ಪಂದನೆ ದೊರಕಿಲ್ಲ. ಇದರಿಂದಾಗಿ ರಾಜ್ಯ ಸರಕಾರ ಈ ಯೋಜನೆ ಮುಂದುವರಿಸಲು ಅಸಾಧ್ಯವಾಗಿತ್ತು ಎಂದು ಲೋಬೊ ವಿವರಿಸಿದರು.

ಕರಾವಳಿ ಕರ್ನಾಟಕದಲ್ಲಿ ಮಂಗಳೂರು ಪ್ರಮುಖ ಮೀನುಗಾರಿಕಾ ಬಂದರಾಗಿದ್ದು ಸುಮಾರು 3,000ಕ್ಕೂ ಅಧಿಕ ಯಾಂತ್ರೀಕೃತ ದೋಣಿಗಳಿವೆ. ಅವುಗಳಿಗೆ ನಿಲ್ಲಲು ಜಾಗವಿಲ್ಲದೆ ತೊಂದರೆಯಾಗಿದೆ. 3ನೇ ಹಂತದ ಜಟ್ಟಿ ಪೂರ್ಣಗೊಂಡರೆ 1,800 ದೋಣಿಗಳಿಗೆ ಲಂಗರು ಹಾಕಲು ಅವಕಾಶ ದೊರೆಯಲಿದೆ. ಕೇಂದ್ರ ಸರಕಾರವು ಅನುದಾನ ನೀಡದ ಕಾರಣ ರಾಜ್ಯ ಸರಕಾರ ಈಗಾಗಲೇ ತನ್ನ ಪಾಲಿನ ಜತೆಗೆ ಹೆಚ್ಚುವರಿಯಾಗಿ 38.89 ಕೋಟಿ ರೂ.ಗಳನ್ನು ಭರಿಸಿದೆ. ಅದನ್ನು ನೀಡಲು ಕೂಡಾ ಕೇಂದ್ರ ಸರಕಾರ ಹಿಂಜರಿಯುತ್ತಿದೆ. ಕೇಂದ್ರವು ಮೀನುಗಾರಿಕಾ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ತಳೆದಿದ್ದು, ಇದರಿಂದ ಮೀನುಗಾರರಿಗೆ ತೊಂದರೆಯಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಳ್ಳಿಗೆ ತಾರನಾಥ ಶೆಟ್ಟಿ, ಮಹಾಬಲ ಮಾರ್ಲ, ಟಿ.ಕೆ. ಸುಧೀರ್, ಸಂತೋಷ್ ಶೆಟ್ಟಿ, ನೀರಜ್ ಪಾಲ್, ಸಬಿತಾ ಮಿಸ್ಕಿತ್, ಆರಿಫ್ ಬಾವಾ, ಸ್ಟೀವನ್ ಮರೋಳಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News