ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅಬೂಬಕರ್: ಚಿಕಿತ್ಸೆಗೆ ನೆರವಾಗಲು ಮನವಿ

Update: 2018-06-23 12:31 GMT

ಬಂಟ್ವಾಳ, ಜೂ. 23: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಹೆಚ್ಚಿನ ಚಿಕಿತ್ಸೆಗೆ ನೆರವು ಕಲ್ಪಿಸುವಂತೆ ದಾನಿಗಳಲ್ಲಿ ಮನವಿ ಮಾಡಿದ್ದಾರೆ.

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಗ್ರಾಮದ ನಿವಾಸಿ ದಿ. ಹಸನಬ್ಬ ಎಂಬವರ ಪುತ್ರ ಅಬೂಬಕರ್ ಅವರು ಕಳೆದ 49 ವರ್ಷಗಳಿಂದ ಮಯೋಟೊನಿಕ್ ಡಿಸ್ಟ್ರೊಫಿ (ದೇಹದಲ್ಲಿ ಬಲಹೀನತೆ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಸನಬ್ಬ ಅವರ ನಾಲ್ವರು ಗಂಡು ಮಕ್ಕಳಲ್ಲಿ ಅಬೂಬಕರ್ ಕಿರಿಯವರು.

ಹುಟ್ಟಿನಿಂದಲೇ ಈ ಕಾಯಿಲೆ ಕಾಣಿಸಿಕೊಂಡಿದ್ದು, ವೈದ್ಯರು ನೀಡಿದ ಔಷಧಿಗಳನ್ನು ಕೊಡಲಾಗುತ್ತಿತ್ತು. ಆದರೆ, ಈ ಅಪರೂಪದ ಕಾಯಿಲೆಗೆ ನಿಖರವಾದ ಅಥವಾ ಗುಣಪಡಿಸುವ ಔಷಧಿಯೇ ಇಲ್ಲ ಎಂದು ಹೇಳಲಾಗುತ್ತಿದೆ.

ಅಬೂಬಕರ್ ಅವರು 7ನೆ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, 49 ವರ್ಷಗಳ ಕಾಲ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿಯೇ ನಿಗೂಢತೆಯ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಇದುವರೆಗಿನ ಔಷಧಿ ಹಾಗೂ ಇನ್ನಿತರ ವೆಚ್ಚವನ್ನು ಇವರ ಸಹೋದರರರು ಹಾಗೂ ಊರಿನ ನಾಗರಿಕರು ಭರಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವರ ದೇಹದ ವಿವಿಧ ಭಾಗಗಳಲ್ಲಿ ಬಲಹೀನತೆ ಹೆಚ್ಚಾಗುತ್ತಿದ್ದು, ಈ ಅಪರೂಪದ ಕಾಯಿಲೆ ಯೊಂದಿಗೆ ಹೋರಾಟ ಮಾಡುತ್ತಿದ್ದಾರೆ.

ಇವರ ಚಿಕಿತ್ಸೆ ನೆರವು ನೀಡಲು ಇಚ್ಛಿಸುವವರು ಅಬೂಬಕರ್ ಅವರ ವಿಜಯ ಬ್ಯಾಂಕ್ ಕಲ್ಲಡ್ಕ ಶಾಖೆ, ಖಾತೆ ಸಂಖ್ಯೆ 110501011003347 ಮತ್ತು ಐಎಫ್‌ಎಸ್‌ಸಿ ಕೋಡ್-ಐಜೆಬಿ 0001105ಕ್ಕೆ ಹಣ ಜಮೆ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9591346832 ಅನ್ನು ಸಂಪರ್ಕಿಸಬಹುದು.

ಲಕ್ಷ ಮಂದಿಯಲ್ಲಿ ಒಬ್ಬರಿಗೆ ಬರುವ ಈ ಕಾಯಿಲೆಯು ಅಪರೂಪದ್ದಾಗಿದೆ. ನನಗೀಗ 49 ವರ್ಷ ವಯಸ್ಸಾಗಿದ್ದು, ಇದುವರೆಗೂ ಯಾವುದೇ ಕೆಲಸಕ್ಕೆ ಹೋಗಿಲ್ಲ. ಅಲ್ಲದೆ, ತನ್ನ ಕೈಯಿಂದ ಸಣ್ಣಪುಟ್ಟ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾಯಿಲೆಯಿಂದ ತನ್ನ ಕೈ-ಕಾಲು ಹಾಗೂ ಗುತ್ತಿಗೆ ಭಾಗದಲ್ಲಿ ಆಗಾಗ ಬಲಹೀನತೆ ಉಂಟಾಗಿ ಕುಸಿದು ಬಿಳುವ ಪ್ರಸಂಗವೇ ಹೆಚ್ಚು. ಪರಿಸರದ ವಾತಾವರಣಕ್ಕೆ ಅನುಗುಣವಾಗಿ ದೇಹದಲ್ಲಿ ಇತರ ಬದಲಾವಣೆಗಳು ಆಗುತ್ತವೆ. ಆಯುರ್ವೇದಿಕ್ ಔಷಧಿಯಿಂದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ, ದೇಹದ ಹಾಗೂ ಕಾಯಿಲೆಯ ಸಮತೋಲನ ಮಾಡಬಹುದು ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಅದಕ್ಕಾಗಿ ದಾನಿಗಳ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದೇನೆ.

- ಅಬೂಬಕರ್ ಕಲ್ಲಡ್ಕ, ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News