ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2018-06-23 14:17 GMT

ಬ್ರೆಡಾ(ಹಾಲೆಂಡ್), ಜೂ.23: ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿ ಶನಿವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತದ ಪರ ರಮಣ್‌ದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್ ಹಾಗೂ ಲಲಿತ್ ಉಪಾಧ್ಯಾಯ ತಲಾ ಒಂದು ಗೋಲು ಬಾರಿಸಿ ಭರ್ಜರಿ ಗೆಲುವಿಗೆ ಕಾಣಿಕೆ ನೀಡಿದರು. 25ನೇ ನಿಮಿಷದಲ್ಲಿ ಗೋಲು ಬಾರಿಸಿದ ರಮಣ್‌ದೀಪ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 17ರ ಹರೆಯದ ದಿಲ್‌ಪ್ರೀತ್ ಸಿಂಗ್ 54ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಸಿಮ್ರಾನ್‌ಸಿಂಗ್ ನೀಡಿದ ಪಾಸ್‌ನ್ನು ಪಡೆದ ಸಿಂಗ್ ಪಾಕ್ ಗೋಲ್‌ಕೀಪರ್ ಇಮ್ರಾನ್ ಬಟ್‌ರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

 ಮನ್‌ದೀಪ್ ಸಿಂಗ್ 57ನೇ ನಿಮಿಷದಲ್ಲಿ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು.

60ನೇ ನಿಮಿಷದಲ್ಲಿ ಗೋಲು ಬಾರಿಸಿದ ಲಲಿತ್ ಉಪಾಧ್ಯಾಯ ಭಾರತಕ್ಕೆ 4-0 ಅಂತರದ ಗೆಲುವು ತಂದುಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News