ಅಪಘಾತವೆಂಬಂತೆ ಬಿಂಬಿಸಿ ಸೇನಾಧಿಕಾರಿ ಪತ್ನಿ ಹತ್ಯೆ

Update: 2018-06-23 17:37 GMT

ಹೊಸದಿಲ್ಲಿ,ಜೂ.23: ಶನಿವಾರ ನೈರುತ್ಯ ದಿಲ್ಲಿಯ ಬ್ರಾರ್ ಚೌಕ್ ಬಳಿ ಸೇನೆಯ ಮೇಜರ್ ಓರ್ವರ ಪತ್ನಿಯ ಶವ ಕತ್ತು ಸೀಳಿ ಕೊಲೆ ಮಾಡಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 30ರ ಹರೆಯದ ಈ ಮಹಿಳೆ ಬೆಳಿಗ್ಗೆ ದಿಲ್ಲಿ ದಂಡುಪ್ರದೇಶದಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಫಿಝಿಯೊಥೆರಪಿಗೆಂದು ಮನೆಯಿಂದ ಹೊರಬಿದ್ದಿದ್ದು,ಅರ್ಧ ಗಂಟೆಯ ಬಳಿಕ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದರು.

ಅವರನ್ನು ವಾಪಸ್ ಮನೆಗೆ ಕರೆದೊಯ್ಯಲು ಮೇಜರ್ ಅವರ ಅಧಿಕೃತ ವಾಹನದ ಚಾಲಕ ಆಸ್ಪತ್ರೆಗೆ ತೆರಳಿದ್ದಾಗ ಆಕೆ ಫಿಝಿಯೊಥೆರಪಿಗೆ ಬಂದಿರಲಿಲ್ಲ ಎಂಬ ಮಾಹಿತಿ ಲಭಿಸಿತ್ತು. ಚಾಲಕ ಆಕೆಯನ್ನು ಆಸ್ಪತ್ರೆಗೆ ಬಿಟ್ಟು ಹೋದ ಬಳಿಕ ಆಕೆ ಇನ್ನೊಂದು ಕಾರನ್ನು ಹತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ರಸ್ತೆಯಲ್ಲಿ ಬಿದ್ದಿದ್ದ ಆಕೆಯ ಶವದ ಮೇಲಿನ ಗುರುತುಗಳು ಆಕೆಯ ಮೇಲೆ ವಾಹನವೊಂದು ಹರಿದಿದ್ದನ್ನು ಸೂಚಿಸುತ್ತಿದ್ದವು. ಮೊದಲು ಅಪಘಾತವೆಂದು ಭಾವಿಸಲಾಗಿತ್ತಾದರೂ ಕತ್ತನ್ನು ಸೀಳಿರುವುದು ಕೊಲೆಯನ್ನು ದೃಢಪಡಿಸಿದೆ. ಹಂತಕ ಮೊದಲು ಆಕೆಯನ್ನು ಕೊಂದು ಬಳಿಕ ಕಾರನ್ನು ಶವದ ಮೇಲೆ ಹತ್ತಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರೀಗ ಮೃತರ ಮೊಬೈಲ್ ಫೋನ್‌ನಲ್ಲಿಯ ಕರೆಗಳ ವಿವರಗಳನ್ನು ಜಾಲಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News