ಆತ್ಮವಿಶ್ವಾಸಭರಿತ ಜಪಾನ್‌ಗೆ ಸೆನೆಗಲ್‌ಎದುರಾಳಿ

Update: 2018-06-23 18:23 GMT

ಎಕಟೆರಿನ್‌ಬರ್ಗ್, ಜೂ.23: ವಿಶ್ವಕಪ್‌ನ ‘ಎಚ್’ ಗುಂಪಿನ ಪಂದ್ಯದಲ್ಲಿ ರವಿವಾರ ಸೆನೆಗಲ್ ತಂಡವನ್ನು ಎದುರಿಸಲಿರುವ ಜಪಾನ್ ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

   ಕೊಲಂಬಿಯಾ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿರುವ ಜಪಾನ್ ತಂಡಕ್ಕೆ ಸೆನೆಗಲ್ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. ಸೆನೆಗೆಲ್ ತಂಡ ಪೊಲೆಂಡ್‌ನ್ನು 2-1 ಅಂತರದಿಂದ ಸೋಲಿಸಿತ್ತು.

‘‘ನಾವು ನಮ್ಮ ಕಾಲನ್ನು ನೆಲದಲ್ಲಿ ಇರಿಸಿಕೊಳ್ಳಬೇಕಾಗಿದೆ. ಕೊಲಂಬಿಯಾ ವಿರುದ್ಧ ಪಂದ್ಯದಲ್ಲಿ 90 ನಿಮಿಷಗಳ ಕಾಲ 10 ಆಟಗಾರರ ವಿರುದ್ಧ ಆಡಿದ್ದನ್ನು ನೆನಪಿಟ್ಟುಕೊಳ್ಳಬೇಕಾಗಿದೆ. ಮುಂದಿನ ಪಂದ್ಯ ವಿಭಿನ್ನವಾಗಿರಲಿದ್ದು ಆ ನಿಟ್ಟಿನಲ್ಲಿ ನಾವು ಯೋಚಿಸಬೇಕಾಗಿದೆ’’ ಎಂದು ಜಪಾನ್ ನಾಯಕ ಮಕೊಟೊ ಹಾಸೆಬ್ ಹೇಳಿದ್ದಾರೆ. ಮಾಸ್ಕೊದಲ್ಲಿ ನಡೆದ ಪೊಲೆಂಡ್ ವಿರುದ್ಧದ ತನ್ನ ಮೊದಲ ಗ್ರೂಪ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸೆನೆಗಲ್ ಭಾರೀ ಆತ್ಮವಿಶ್ವಾಸದಲ್ಲಿದೆ.

‘‘ಶಿಸ್ತುಬದ್ಧ ಪ್ರದರ್ಶನ ನೀಡಿದ ಕಾರಣ ಸೆನೆಗಲ್ ಕಳೆದ ಪಂದ್ಯದಲ್ಲಿ ಜಯ ಸಾಧಿಸಿದೆ. ಸೆನೆಗಲ್ ತಂಡ ಅತ್ಯಂತ ಪ್ರಬಲವಾಗಿದೆ’’ ಎಂದು ಕೋಚ್ ಅಲಿಯು ಸಿಸ್ಸ್ ಹೇಳಿದ್ದಾರೆ.

16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿರುವ ಸೆನೆಗಲ್ ತಂಡ ಈಜಿಪ್ಟ್ ಹಾಗೂ ಮೊರಾಕ್ಕೊದೊಂದಿಗೆ ಆಫ್ರಿಕದ ಭರವಸೆ ಭಾರವನ್ನು ಹೊತ್ತುಕೊಂಡಿದೆ. ನೈಜೀರಿಯ ಹಾಗೂ ಟ್ಯುನಿಶಿಯ ಈಗಾಗಲೇ ಮೊದಲ ಪಂದ್ಯವನ್ನು ಸೋತಿವೆ.

ಜಪಾನ್ ತಂಡ ಗೋಲ್‌ಸ್ಕೋರರ್‌ಗಳಾದ ಶಿಂಜಿ ಕಗಾವಾ, ಕೆಸುಕೆ ಹೊಂಡಾ ಹಾಗೂ ಯುಯಾ ಒಸಾಕೊರನ್ನು ಹೆಚ್ಚು ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News