ಉ.ಪ್ರದೇಶ: ಆ್ಯಂಬುಲೆನ್ಸ್ ಸಿಗದೆ ಕೈಗಾಡಿಯಲ್ಲಿ ಅಜ್ಜಿಯನ್ನು ಆಸ್ಪತ್ರೆಗೆ ಸಾಗಿಸಿದ ಬಾಲಕ!

Update: 2018-06-24 15:18 GMT

ಗೋರಖಪುರ,ಜೂ.24: ನೆರೆಯ ಬಸ್ತಿ ಜಿಲ್ಲೆಯಲ್ಲಿ 12ರ ಹರೆಯದ ಬಾಲಕನೋರ್ವ ಸರಕಾರಿ ಆ್ಯಂಬುಲೆನ್ಸ್ ಲಭ್ಯವಾಗದೇ ಕೈಗಾಡಿಯಲ್ಲಿ ತನ್ನ ಅಸ್ವಸ್ಥ ಅಜ್ಜಿಯನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದ್ದು,ಜಿಲ್ಲಾಡಳಿತವು ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಶುಕ್ರವಾರ ಮಧ್ಯಾಹ್ನ ಛೋಟು ಅಜ್ಜಿ ಅನಾರಾ ದೇವಿ(85)ಯೊಂದಿಗೆ ಕಮಲಾಪುರ ಗ್ರಾಮದ ತನ್ನ ಮನೆಯಲ್ಲಿದ್ದಾಗ ಏಕಾಏಕಿ ಆಕೆಯ ಅರೋಗ್ಯ ಹದಗೆಟ್ಟಿತ್ತು. ನೆರೆಕರೆಯವರು ಸರಕಾರಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರೂ ಲಭ್ಯವಾಗಿರಲಿಲ್ಲ. ಅಜ್ಜಿ ನೋವಿನಿಂದ ಕೂಗುತ್ತಿದ್ದು,ಛೋಟು ಆಕೆಯನ್ನು ಕೈಗಾಡಿಯಲ್ಲಿ ಮೂರು ಕಿ.ಮೀ.ದೂರದ ಸಮುದಾಯ ಆಸ್ಪತ್ರೆಗೆ ಸಾಗಿಸಿದ್ದ. ಅನಾರಾ ದೇವಿ ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತನ್ನ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಮತ್ತು ತನ್ನ ತಾಯಿಗೆ ಒಳ್ಳೆಯ ಚಿಕಿತ್ಸೆಯನ್ನು ಕೊಡಿಸಲು ತನಗೆ ಸಾಧ್ಯವಾಗುತ್ತಿಲ್ಲ. ಘಟನೆ ನಡೆದಾಗ ತಾನು ಮನೆಯಲ್ಲಿರಲಿಲ್ಲ. ಈಗ ಹೊರಗಿನಿಂದ ಕೆಲವು ಪರೀಕ್ಷೆಗಳನ್ನು ಮಾಡಿಸುವಂತೆ ವೈದ್ಯರು ತಿಳಿಸಿದ್ದಾರೆ. ಅದಕ್ಕಾಗಿ ಹಣ ಹೊಂದಿಸಲು ಪರದಾಡುತ್ತಿದ್ದೇನೆ ಎಂದು ಛೋಟುವಿನ ತಂದೆ, ಕೂಲಿಕಾರ್ಮಿಕರಾಗಿರುವ ಅಶೋಕ ಕುಮಾರ ಅಳಲು ತೋಡಿಕೊಂಡರು.

ಘಟನೆ ತನ್ನ ಗಮನಕ್ಕೆ ಬಂದಿದೆ. ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿಗಳಿಂದ ತನಿಖೆಗೆ ಆದೇಶಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಕೈಸೇರಲಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅರವಿಂದ ಪಾಂಡೆ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News