ಮುಂಗಾರು ಚೇತರಿಕೆ: ಈ ವಾರ ಉತ್ತರ ಭಾರತ ತಲುಪುವ ನಿರೀಕ್ಷೆ

Update: 2018-06-24 16:40 GMT

ಹೊಸದಿಲ್ಲಿ, ಜೂ.24: ದೇಶದ ಶೇ.25ರಷ್ಟು ಭಾಗದಲ್ಲಿ ಈ ಬಾರಿ ಸಾಮಾನ್ಯ ಅಥವಾ ಅಧಿಕ ಮಳೆಯಾಗಿದ್ದು ಕಳೆದ ವಾರಾಂತ್ಯದಲ್ಲಿ ಮುಂಗಾರು ಮಳೆ ಚೇತರಿಸಿಕೊಂಡಿದ್ದು ಈ ವಾರ ಉತ್ತರ ಮತ್ತು ಮಧ್ಯಭಾರತವನ್ನು ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.

 ಕಳೆದ ಕೆಲ ದಿನಗಳಿಂದ ತಾಪಮಾನದಲ್ಲಿ ಏರಿಕೆ ಕಂಡಿರುವ ಉತ್ತರ ಮತ್ತು ಮಧ್ಯಭಾರತದ ಪ್ರದೇಶಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಭಾರೀ ಮಳೆಯಾಗಲಿದೆ. ಜೂನ್ 27ರಿಂದ ವಾಯುವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ. ಜೂನ್ 29ರಂದು ದಿಲ್ಲಿಯಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಒಟ್ಟಾರೆ ಮೈನಸ್ 10 ಶೇಕಡ ಮುಂಗಾರು ಮಳೆ ಕೊರತೆಯಾಗಿದೆ. ಹವಾಮಾನಶಾಸ್ತ್ರದ ಪ್ರಕಾರದ ನಾಲ್ಕು ವಿಭಾಗಗಳ ಪೈಕಿ ದಕ್ಷಿಣ ಪರ್ಯಾಯ ದ್ವೀಪ ಸಮೂಹದಲ್ಲಿ ಶೇ.29ರಷ್ಟು ಅಧಿಕ ಮಳೆಯಾಗಿದ್ದರೆ, ಪೂರ್ವ ಈಶಾನ್ಯ ಭಾರತ ಹಾಗೂ ವಾಯುವ್ಯ ಭಾರತದಲ್ಲಿ ಕ್ರಮವಾಗಿ ಶೇ.29 ಮತ್ತು ಶೇ.24ರಷ್ಟು ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಅಲ್ಲದೆ ದೇಶದ 36 ಹವಾಮಾನಶಾಸ್ತ್ರ ಉಪವಿಭಾಗದ ಪೈಕಿ 24 ಉಪವಿಭಾಗಗಳಲ್ಲಿ ಕಡಿಮೆ ಮತ್ತು ಅತೀ ಕಡಿಮೆ ಮಳೆಯಾಗಿದೆ.

ಜೂನ್ 23ರಿಂದ ಮುಂಗಾರು ಚುರುಕಾಗಿದೆ. ರವಿವಾರ ಗುಜರಾತ್‌ನ ಸೌರಾಷ್ಟ್ರ, ವೆರಾವಲ್, ಅಹ್ಮದಾಬಾದ್ ಹಾಗೂ ಮಹಾರಾಷ್ಟ್ರದ ಅಮರಾವತಿ ಪ್ರದೇಶದತ್ತ ಮುಂದುವರಿದಿದೆ. ಪೂರ್ವ ಭಾಗದಲ್ಲಿ ಅಸ್ಸಾಂ ರಾಜ್ಯವನ್ನು ಪೂರ್ಣ ಆವರಿಸಿಕೊಂಡಿರುವ ಮುಂಗಾರು ಮಳೆ ಪ.ಬಂಗಾಳದ ವಾಯುವ್ಯದಲ್ಲಿರುವ ಜಲಪಾಗುರಿ ಹಾಗೂ ಈಶಾನ್ಯದಲ್ಲಿರುವ ಮಿಡ್ನಾಪೋರ್ ತಲುಪಿದೆ. ಜೂನ್ 27ರಿಂದ ಉತ್ತರ ಭಾರತದ ಬಯಲುಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮೊಹಾಪಾತ್ರ ತಿಳಿಸಿದ್ದಾರೆ.

ಮುಂದಿನ 48 ಗಂಟೆಗಳಲ್ಲಿ ಒಡಿಶಾದ ಉಳಿದ ಭಾಗಗಳು, ಪಶ್ಚಿಮ ಬಂಗಾಳ, ಗುಜರಾತ್ ಹಾಗೂ ಮಧ್ಯಪ್ರದೇಶದ ಕೆಲವು ಪ್ರದೇಶಗಳು, ಮಹಾರಾಷ್ಟ್ರದ ಉಳಿದ ಭಾಗಗಳು ಹಾಗೂ ಉತ್ತರಪ್ರದೇಶದ ಉತ್ತರ ಭಾಗದಲ್ಲಿ ಮಳೆಯಾಗಲಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News