ನವಜಾತ ಶಿಶುವನ್ನು ಸೆಗಣಿ ಹೊಂಡದಲ್ಲಿ ಹೂತ ಮಹಿಳೆ!

Update: 2018-06-24 16:46 GMT
ಸಾಂದರ್ಭಿಕ ಚಿತ್ರ

ಮಯೂರ್‌ಬಂಜ್, ಜೂ.24: ಮಹಿಳೆಯೊಬ್ಬಳು ತನ್ನ ನವಜಾತ ಶಿಶುವನ್ನು ಸೆಗಣಿ ಹೊಂಡದಲ್ಲಿ ಹೂತ ಘಟನೆ ಒಡಿಶಾದ ಮಯೂರ್‌ಬಂಜ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಪಸಹಿ ಗ್ರಾಮದ ಹಿಂದು ಸಿಂಗ್ ಎಂಬವರ ಪತ್ನಿ ಮಸೂರಿ ಸಿಂಗ್, ಬುಧವಾರ ರಾತ್ರಿ ತನ್ನ ಆಗತಾನೆ ಜನಿಸಿದ ಮಗುವನ್ನು ಸೆಗಣಿ ಹೊಂಡದಲ್ಲಿ ಹೂಳಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಸುತ್ತಮುತ್ತಲ ಪ್ರದೇಶದಲ್ಲಿ ಕೊಳೆತ ವಾಸನೆಯು ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

ಮಗುವು ಹುಟ್ಟುವಾಗಲೇ ಮೃತಪಟ್ಟಿತ್ತು ಎಂದು ಮಹಿಳೆ ತಿಳಿಸಿದ್ದರೂ ಸ್ಥಳೀಯರು ಮಾತ್ರ ಆ ಮಗು ಅನೈತಿಕ ಸಂಬಂಧದಿಂದ ಜನಿಸಿದ್ದ ಕಾರಣ ಆಕೆ ಅದನ್ನು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹೆರಿಗೆಯ ನಂತರ ಮಹಿಳೆಯು ಮಗುವನ್ನು ಕೊಂದು ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟಿದ್ದಳು. ನಂತರ ಎಲ್ಲರೂ ತಮ್ಮ ಮನೆಗೆ ತೆರಳಿದ ಮೇಲೆ ಅದನ್ನು ಸೆಗಣಿ ಹೊಂಡದಲ್ಲಿ ಹೂಳಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಡೆದ ಸಮಯ ಆರೋಪಿ ಮಹಿಳೆಯ ಪತಿ ಕೇರಳದಲ್ಲಿ ಕೆಲಸಲ್ಲಿದ್ದರು ಎಂದು ವರದಿ ತಿಳಿಸಿದೆ. ಸದ್ಯ ಮಗುವಿನ ಮೃತದೇಹವನ್ನು ಹೊಂಡದಿಂದ ಹೊರತೆಗೆಯಲಾಗಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಸರತ್ ಪೊಲೀಸ್ ಠಾಣಾ ನಿರೀಕ್ಷಕ ನಬಗನ್ ಮಲಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News