ತಾನು ಮೋದಿಯ ‘ದೊಡ್ಡಮ್ಮ’ ಎಂದು ಕೇಂದ್ರ ಮಾಹಿತಿ ಆಯೋಗಕ್ಕೆ ಪತ್ರ ಬರೆದ ವೃದ್ಧೆ !

Update: 2018-06-24 16:48 GMT

ಹೊಸದಿಲ್ಲಿ, ಜೂ.24: ತನ್ನ ಒಡೆತನದಲ್ಲಿರುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಔಷಧಾಲಯದ ಲೀಸ್ ಒಪ್ಪಂದದ ನವೀಕರಣದ ಬಗ್ಗೆ ವಿವರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯ ‘ದೊಡ್ಡಮ್ಮ’ ಎಂದು ಹೇಳಿಕೊಂಡಿರುವ ಗುಜರಾತ್‌ನ 90ರ ಹರೆಯದ ವಿಧವೆಯೊಬ್ಬರು ಕೋರಿಕೆ ಸಲ್ಲಿಸಿದ್ದಾರೆ.

ದಹಿಬೆನ್ ನರೋತ್ತಮ್‌ದಾಸ್ ಮೋದಿ ಎಂಬ ವೃದ್ಧೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕಳೆದ ವಾರ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ನಡೆಸಿದ್ದಾರೆ. ತನ್ನ ಒಡೆತನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸರಕಾರಿ ಔಷಧಾಲಯದ ಲೀಸ್ ಒಪ್ಪಂದ ನವೀಕರಣದ ಕುರಿತು ವಿವರ ನೀಡುವಂತೆ ತಾನು ಕಾರ್ಮಿಕ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು ಅಲ್ಲಿಂದ ದೊರೆತ ಉತ್ತರ ತೃಪ್ತಿಕರವಾಗಿಲ್ಲ ಎಂದು ದಹಿಬೆನ್ ತಿಳಿಸಿದ್ದಾರೆ.

ಕಟ್ಟಡವನ್ನು 1983ರ ಎಪ್ರಿಲ್ 11ರಂದು ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಔಷಧಾಲಯಕ್ಕೆ ತಿಂಗಳಿಗೆ 600 ರೂ. ಬಾಡಿಗೆಗೆ ನೀಡಲಾಗಿತ್ತು. ಬಳಿಕ 1998ರವರೆಗೆ ಬಾಡಿಗೆಯನ್ನು ಪರಿಷ್ಕರಿಸಲಾಗಿದ್ದು 1,500 ರೂ. ಬಾಡಿಗೆ ನಿಗದಿಯಾಗಿತ್ತು. ಆದರೆ ಆ ಬಳಿಕ ಬಾಡಿಗೆಯನ್ನು ಹೆಚ್ಚಿಸಲಾಗಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ದಹಿಬೆನ್ ತಿಳಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಕಾರ್ಮಿಕ ಇಲಾಖೆಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಲೀಸ್ ಒಪ್ಪಂದದ ವಿವರ, ನವೀಕರಣ, ಬಾಡಿಗೆ ನಿರ್ಧರಿಸುವ ಮಾನದಂಡ, ಪ್ರತೀ ಐದು ವರ್ಷಕ್ಕೊಮ್ಮೆ ಬಾಡಿಗೆ ನವೀಕರಿಸದಿರಲು ಕಾರಣ ಹಾಗೂ ಲೀಸ್ ಅವಧಿ ನವೀಕರಿಸದ ಕಾರಣ ಬಾಕಿಯಾಗಿರುವ ಮೊತ್ತವನ್ನು ಪಾವತಿಸಲು ಇಲಾಖೆ ಸಿದ್ಧವಿದೆಯೇ ಎಂಬ ವಿವರ ಕೋರಿದ್ದರು. ಆದರೆ ಇಲಾಖೆ ನೀಡಿದ ಉತ್ತರದಿಂದ ತೃಪ್ತಿಯಾಗದ ಕಾರಣ ಮಾಹಿತಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.

ತಾನು ಒಬ್ಬಂಟಿಯಾಗಿದ್ದು ಕಟ್ಟಡದಿಂದ ದೊರೆಯುವ 1,500 ರೂ. ಬಾಡಿಗೆ ಮಾತ್ರ ತನ್ನ ಜೀವನಾಧಾರವಾಗಿದೆ ಎಂದು ವೃದ್ಧ ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದರು. ಬಾಡಿಗೆ ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸುವಂತೆ ಕಟ್ಟಡದ ಮಾಲಕರಿಗೆ 2002ರ ಜುಲೈ 24 ಮತ್ತು 2008ರ ಮೇ 15ರಂದು ತಿಳಿಸಲಾಗಿದೆ. ಆದರೆ ಅವರಿಂದ ಉತ್ತರ ದೊರೆತಿಲ್ಲ ಎಂದು ಸಮಾಜ ಕಲ್ಯಾಣ ಮತ್ತು ಉಪಕರ ಆಯುಕ್ತ ಎಸ್.ಎಸ್. ಭೋಪ್ಲೆ ಆಯೋಗಕ್ಕೆ ಪತ್ರ ಬರೆದು ತಿಳಿಸಿದ್ದಾರೆ.

ಇದಕ್ಕೆ ಉತ್ತರಿಸಿದ ದಹಿಬೆನ್ ಪರ ವಕೀಲರು, ಮಹಿಳೆ ವಯೋವೃದ್ಧರಾಗಿರುವ ಕಾರಣ ದಸ್ತಾವೇಜೀಕರಣದ ಪ್ರತಿಯೊಂದು ಹಂತದಲ್ಲೂ ಲೋಕೋಪಯೋಗಿ ಇಲಾಖೆಗೆ ಖುದ್ದಾಗಿ ಹಾಜರಾಗಲು ಅಸಾಧ್ಯವಾಗಿದೆ. ಅಲ್ಲದೆ ದಹಿಬೆನ್ ಕೋರಿರುವ ಮಾಹಿತಿಯನ್ನು ಒದಗಿಸಿದರೆ ಮಾತ್ರ ಅವರು ದಾಖಲೆಪತ್ರಗಳನ್ನು ನೀಡಲು ಸಾಧ್ಯ ಎಂದು ತಿಳಿಸಿದ್ದಾರೆ.

ತಾನು 90ರ ಹರೆಯದ ವಿಧವೆಯಾಗಿದ್ದು ನನಗೆ ಮಕ್ಕಳು ಅಥವಾ ಸಹೋದರ, ಸಹೋದರಿಯರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಮಾನಸಿಕ ಕ್ರೌರ್ಯ ಅಸಹನೀಯವಾಗಿದೆ ಎಂದು ದಹಿಬೆನ್ ಕೇಂದ್ರ ಮಾಹಿತಿ ಆಯೋಗಕ್ಕೆ ಬರೆದಿರುವ ಮತ್ತೊಂದು ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News