ಮಂಗಳೂರು: ಮೀನಿಗೆ ರಾಸಾಯನಿಕ ಮಿಶ್ರಣ ವದಂತಿ

Update: 2018-06-24 17:28 GMT

ಮಂಗಳೂರು, ಜೂ. 24: ಜಿಲ್ಲೆಯಲ್ಲಿ ತಿಂಗಳ ಹಿಂದೆ ನಿಫಾಹ್ ಜ್ವರದ ಭೀತಿಯ ಜೊತೆ ಹರಡಿದ ವದಂತಿಯಿಂದ ಹಣ್ಣಿನ ಮಾರಾಟಗಾರರು ಸಾಕಷ್ಟು ನಷ್ಟ ಹೊಂದಿದ್ದಾರೆ. ಅದೇ ರೀತಿ ಇದೀಗ ಕೆಲವು ದಿನಗಳ ಹಿಂದೆ ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ವದಂತಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಡುತ್ತಿರುವುದರಿಂದ ಮೀನು ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕಳೆದ ಕೆಲವು ದಿನಗಳಿಂಂದ ಸಾಮಾಜಿಕ ಜಾಲತಾಣದಲ್ಲಿ ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ಆಕ್ಷೇಪಣೆಯನ್ನು ಮಾಡುವ ಓರ್ವ ಗ್ರಾಹಕ ಮೀನು ಮಾರಾಟಗಾರರ ಬಳಿ ವಾಗ್ವಾದ ಮಾಡುವುದನ್ನು ಒಳಗೊಂಡ ವೀಡಿಯೊ ಒಂದನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಡಲಾಗಿದೆ. ಈ ಸಂಭಾಷಣೆಯಲ್ಲಿ ಗ್ರಾಹಕರು ಮೀನು ಮಾರಾಟಗಾರರನ್ನು ಆಕ್ಷೇಪಿಸುತ್ತಿದ್ದಾರೆ. ಮೀನು ಮಾರಾಟಗಾರರು ತಾನು ಆ ರೀತಿ ಯಾವೂದೇ ಕೆಮಿಕಲ್ ಬಳಸಿಲ್ಲ .ಹೊರಗಿನಿಂದ ಮೀನು ಬರುತ್ತದೆ. ನಾವು ಮಾರಾಟ ಮಾಡುತ್ತಿದ್ದೇವೆ ಎನ್ನುವ ಉತ್ತರವನ್ನು ನೀಡುತ್ತಾರೆ.

ಈ ಸಂಭಾಷಣೆಯ ವೀಡಿಯೊ ವೈರಲ್ ಆಗಿರುವುದರಿಂದ ಕಳೆದ ಎರಡು ದಿನಗಳಿಂದ ಜಿಲ್ಲೆಯ ಸ್ಥಳೀಯ ಬಿಡಿ ಮೀನು ಮಾರಾಟಗಾರರ ಬಳಿ ನಿತ್ಯ ಮೀನು ಖರೀದಿಸುವ ಗ್ರಾಹಕರು ಮೀನಿಗೆ ಕೆಮಿಕಲ್ ಹಾಕಿದೆಯೇ ?ಎಂದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ಕೆಲವು ದಿನ ಮೀನು ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದು ಮೀನು ಮಾರಾಟದಲ್ಲಿ ಇಳಿಕೆಯಾಗಿರುವುದಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ರಜೆ ಇರುವುದರಿಂದ ಸ್ಥಳೀಯವಾಗಿ ಮೀನು ಮಾರುಕಟ್ಟೆಗೆ ಬಾರದೆ ಇರುವ ಕಾರಣ ಜಿಲ್ಲೆಗೆ ಮದ್ರಾಸು, ತಮಿಳುನಾಡು, ಹೈದರಾಬಾದ್ ಮೊದಲಾದ ಕಡೆಗಳಿಂದ ಮೀನು ಪೂರೈಕೆಯಾಗುತ್ತಿದೆ. ಈ ಸಂದರ್ಭ ಮೀನು ಕೆಡದಂತೆ ಸಂರಕ್ಷಿಸಲು ಕೆಲವೊಂದು ರಾಸಾಯನಿಕಗಳ ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ವದಂತಿ ಹರಡಿದೆ. ಕೇರಳದಲ್ಲಿ ಹೈದರಾಬಾದಿನಿಂದ ಪೂರೈಕೆಯಾದ ಮೀನಿನಲ್ಲಿ ಈ ರೀತಿ ಆಗಿದೆ ಎನ್ನುವ ವದಂತಿ ಹರಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕರಾವಳಿಯಲ್ಲಿ ಮೀನು ಮಾರಾಟಗಾರರು ಸಮಸ್ಯೆ ಎದುರಿಸುವಂತಾಗಿದೆ.

"ಮೀನ್ ತಿಂದ್‌ಂಡ ಅಂಚ ಆಪುಂಡು, ಇಂಚ ಆಪುಂಡ್ ಪಂಡ್‌ದ್ ಇತ್ತೆ ಇಡೆಗ್ ಜನನೇ ಬರಂದಿಲೆಕ್ಕಾತ್‌ಂಡ್ .....’’(ಮೀನು ತಿಂದರೆ ಹಾಗಾಗುತ್ತದೆ ಹೀಗಾಗುತ್ತದೆ ಎಂದು ಏನೆಲ್ಲಾ ಹೇಳಿ ಈಗ ಇಲ್ಲಿಗೆ ಜನರೇ ಬರದಂತಾಗಿದೆ) ಮಂಗಳೂರು ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮೀನು ಮಾರುಕಟ್ಟೆಯಲ್ಲಿ ಯಾವಾಗಲೂ ಜನ ಜಂಗುಳಿ ಇರುತ್ತಿದ್ದ ಪ್ರದೇಶದಲ್ಲಿ ಜನಸಂಖ್ಯೆ ವಿರಳವಾಗಿದೆ. ಅಲ್ಲಿರುವ ಮೀನು ಮಾರುವ ಮಹಿಳೆಯರಲ್ಲಿ ಆತಂಕವಿದೆ. ‘‘ಮೀನ್ ತಿಂದ್‌ಡ ಅಂಚ ಆಪುಂಡು ಇಂಚ ಆಪುಂಡ್ ಪಂಡ್‌ದ್ ಎಂಚೆಂಚಿನ ಪನೊಂದು ಇತ್ತೆ ಇಡೆಗ್ ಜನನೆ ಬರಂದಿಲೆಕ್ಕಾತ್‌ಂಡ್ .....’’ಎಂದು ಮಾರಾಟವಾಗದೆ ಉಳಿದ ಮೀನಿನ ಮುಂದೆ ಕೂತು ಮೀನು ಮಾರುವ ಮಹಿಳೆಯರು ತಮ್ಮ ಕಳವಳ ವ್ಯಕ್ತಪಡಿಸುತ್ತಾರೆ.

ಕೇರಳದಲ್ಲಿ 2017 ಅಕ್ಟೋಬರ್‌ನಲ್ಲಿ ರಲ್ಲಿ ನಡೆದ ‘ಅಪರೇಷನ್ ಸಾಗರ ರಾಣಿ ’:-ಮೀನು ಸಂಸ್ಕರಣೆಗಾಗಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಕೇರಳದ ಕೋಝಿಕೋಡ್ ಜಿಲ್ಲೆಯಲ್ಲಿ ( ಫುಡ್ ಸೇಫ್ಟಿ ಆ್ಯಂಡ್ ಸ್ಟಾಂರ್ಡಡ್ ಆಥಾರಿಟಿ ಆಫ್ ಇಂಡಿಯಾ ) ಭಾರತದ ಆಹಾರ ಗುಣಮಟ್ಟ ಮತ್ತು ಸುರಕ್ಷತೆಯ ಮಾನದಂಡದ ಪ್ರಾಧಿಕಾರದ ಅಧಿಕಾರಿಗಳ ತಂಡ ವಿವಿಧ ಮೀನು ಮಾರುಕಟ್ಟೆಗೆ ತೆರಳಿ ಸಂಗ್ರಹಿಸಿದ ಮೀನುಗಳ ಪೈಕಿ 47 ಜಾತಿಯ ಮೀನುಗಳನ್ನು ಕೆಡದಂತೆ ಸಂಸ್ಕರಣೆ ಮಾಡಲು ರಾಸಾಯನಿಕ ಬಳಕೆ ಮಾಡಿರುವುದು ಪತ್ತೆಯಾಗಿದೆ.

ಮೀನು ಕೆಡದಂತೆ ಇಡಲು ಸೋಡಿಯಂ ಬೆನ್ಸೊಯೆಟ್ ಮತ್ತು ಅಮೋನಿಯ ಮತ್ತು ಫಾರ್ಮಲೀನ್ ದ್ರಾವಣದಂತಹ ರಾಸಾಯನಿಕ ಬಳಕೆಯಾಗಿರುವುದು ಪತ್ತೆಯಾಗಿದೆ. ಬಳಿಕ ಈ ರೀತಿ ಮೀನು ಸಂಸ್ಕರಣೆಗೆ ಮಾನವನ ದೇಹಕ್ಕೆ ಹಾನಿಕಾರವಾದ ರಾಸಾಯನಿಕ ಬಳಸದಂತೆ ಮೀನುಗಾರರಲ್ಲಿ ಮತ್ತು ಮೀನು ಮಾರಾಟಗಾರರಲ್ಲಿ ಜಾಗೃತಿ ಮೂಡಿಸುವ ಕೆಲಸದೊಂದಿಗೆ ಇಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳವ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿತ್ತು.

ದ.ಕ ಜಿಲ್ಲೆಯಲ್ಲಿ ಅಧಿಕೃತ ದೂರು ದಾಖಲಾಗಿಲ್ಲ: ಮಹೇಶ್

ಜಿಲ್ಲೆಯಲ್ಲಿ ಈ ರೀತಿ ಮೀನಿನಲ್ಲಿ ರಾಸಾಯನಿಕ ಸಿಂಪಡಣೆಯ ಬಗ್ಗೆ ದೂರು ಬಂದಿಲ್ಲ. ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಇರುವು ದರಿಂದ ನಾಡದೋಣಿಗಳ ಮೀನುಗಾರಿಕೆ ಹೊರತಾಗಿ ಬೇರೆ ಪ್ರದೇಶಗಳಿಂದ ಮೀನು ಪೂರೈಕೆಯಾಗುತ್ತದೆ. ಆದುದರಿಂದ ಈ ರೀತಿಯ ವದಂತಿ ಹಬ್ಬಿರಬಹುದು. ಕರಾವಳಿಯ ಮೀನುಗಾರಿಕೆಯ ಸಂದರ್ಭದಲ್ಲಿ ಇಲ್ಲಿನ ಮೀನುಗಾರರು ಈ ರೀತಿಯ ಕೆಮಿಕಲ್ ಬಳಸುವುದಿಲ್ಲ. ಇಲ್ಲಿನ ಮೀನುಗಾರರು ಹಿಡಿದ ಮೀನನ್ನು ತಕ್ಷಣ ವಿಲೇವಾರಿ ಮಾಡುವುದರಿಂದ ಈ ಸಮಸ್ಯೆ ಇರಲಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕನ ಮಹೇಶ್ ತಿಳಿಸಿದ್ದಾರೆ.

ಕರಾವಳಿಯಲ್ಲಿ ಮೀನುಗಾರಿಕಾ ರಜೆಯ ಸಂದರ್ಭದಲ್ಲಿ ಹೊರ ರಾಜ್ಯಗಳ ಒಳನಾಡಿನ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಈ ರೀತಿಯ ದೂರು ಬಂದಲ್ಲಿ ಆಹಾರ ಮತ್ತು ಸುರಕ್ಷತೆಯ ಇಲಾಖೆಯ ಅಧಿಕಾರಿಗಳು ಮೀನಿನ ಮಾದರಿಯನ್ನು ಸಂಗ್ರಹಿಸಿ ಅದನ್ನು ಕೊಚ್ಚಿಯಲ್ಲಿರುವ ಸೆಂಟ್ರಲ್ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದು ಮಹೇಶ್ ತಿಳಿಸಿದ್ದಾರೆ.

ಹೊಳೆ ಮೀನು ಹಾಗೂ ನಾಡದೋಣಿಯ ಮೂಲಕ ಮಂಜುಗಡ್ಡೆ ಬಳಸದೆ ಮೀನು ಮಾರಾಟ ಮಾಡುವವರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ನಮ್ಮ ಮೀನಿಗೆ ಮಳೆಗಾಲದಲ್ಲಿ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ. ಆದರೆ ಹೊರರಾಜ್ಯಗಳಿಂದ ಬರುವ ರಾಹು, ಕಾಟ್ಲಾ ಮೊದಲಾದ ಒಳ ನಾಡಿನ ಮೀನಿಗೂ ಬೇಡಿಕೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದೆ.

ರಾಸಾಯನಿಕ ಬಳಕೆ ಮಾಡಿದ ಮೀನಿನ ಕೆಲವು ಲಕ್ಷಣ

ರಾಸಾಯನಿಕ ಬಳಕೆ ಮಾಡಿದ ಮೀನು ತಾಜಾ ಮೀನಿನಂತೆ ಕಂಡು ಬಂದರೂ ಅದರ ವಾಸನೆಯಲ್ಲಿ ವ್ಯತ್ಯಾಸವಿರುತ್ತದೆ. ಮೀನು ಗಡಸುತನವನ್ನು ಹೊಂದಿರುತ್ತದೆ. ಮೀನಿನ ಮಾಂಸವೂ ರಬ್ಬರಿನಂತೆ ಗಟ್ಟಿಯಾಗ ತೊಡಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕರಾವಳಿಯಲ್ಲಿ ಎರಡು ತಿಂಗಳಲ್ಲಿ ಹಣ್ಣು, ಮೀನು ಮಾರಾಟಗಾರರಿಗೆ ಬರೆ

ಕೇರಳದಲ್ಲಿ ಮಾರಕವಾದ ನಿಪಾಹ್ ವೈರಸ್ ಕಂಡು ಬಂದಿದೆ ಎನ್ನುವ ಸುದ್ದಿಯ ಜೊತೆ ಅದು ಬಾವಲಿ ತಿನ್ನುವ ಹಣ್ಣಿನಿಂದ ಬರುತ್ತದೆ ಎನ್ನುವ ವದಂತಿ ವೇಗವಾಗಿ ಹಬ್ಬಿದ ಪರಿಣಾಮವಾಗಿ ಕರಾವಳಿಯಲ್ಲಿ ಹಣ್ಣಿನ ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂತು.

ಮೇ ಅಂತ್ಯದ ವೇಳೆಗೆ ಹಣ್ಣಿನ ಮಾರುಕಟ್ಟೆ ಸಹಜ ಸ್ಥಿತಿಗೆ ಬರುವ ಹೊತ್ತಿಗೆ ಇದೀಗ ಮೀನು ಮಾರಾಟಗಾರರು ಸಮಸ್ಯೆ ಎದುರಿಸುವಂತಾಗಿದೆ. ದೇಶದ ಮೀನು ಮಾರಾಟದಲ್ಲಿ ಗರಿಷ್ಠ ಪ್ರಮಾಣದ ಮೀನು ರಫ್ತಾಗುತ್ತಿರುವ ಕರಾವಳಿ ಜಿಲ್ಲೆಯಲ್ಲಿ ಮೀನಿನ ಮಾರಾಟದಲ್ಲಿ ಅಥವಾ ಮೀನಿನಲ್ಲಿ ರಾಸಾಯನಿಕ ಮಿಶ್ರಣವಾಗಿದೆಯೇ ? ಎನ್ನುವ ಬಗ್ಗೆ ಪರೀಕ್ಷಿಸಲು ಸೂಕ್ತವಾದ ಸುಸಜ್ಜಿತ ಪರೀಕ್ಷಾ ಕೇಂದ್ರವಿಲ್ಲ. ಪರೀಕ್ಷಿಸಬೇಕಾದರೆ ಕೊಚ್ಚಿನ್‌ಗೆ ಕಳುಹಿಸಬೇಕಾಗಿದೆ. ಮಂಗಳೂರಿನಲ್ಲಿಯೂ ಇಂತಹ ಪರೀಕ್ಷಾ ಕೇಂದ್ರದ ಅಗತ್ಯವಿದೆ ಎಂದು ಹಲವು ಗ್ರಾಹಕರು ಹಾಗೂ ಮೀನು ಮಾರಾಟಗಾರರು ಅಭಿಪ್ರಾಯ ಪಡುತ್ತಾರೆ.

Writer - ವರದಿ; ಪುಷ್ಪರಾಜ್.ಬಿ.ಎನ್

contributor

Editor - ವರದಿ; ಪುಷ್ಪರಾಜ್.ಬಿ.ಎನ್

contributor

Similar News