ಕಂದಾಯ ಸಮಸ್ಯೆ ಶೀಘ್ರ ಇತ್ಯರ್ಥ: ಸಚಿವ ಖಾದರ್

Update: 2018-06-25 10:57 GMT

ಮಂಗಳೂರು, ಜೂ. 25: ಕಂದಾಯ ಇಲಾಖೆಗೆ ಸಂಬಂಧಿಸಿ ಜನರಿಗೆ ಮನೆಕಟ್ಟುವ ಸಂದರ್ಭ ಭೂ ಪರಿವರ್ತನೆ ಸೇರಿದಂತೆ ಇತರ ಕೆಲಸಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಸಲುವಾಗಿ ಸಂಪೂರ್ಣವಾಗಿ ಚರ್ಚಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ)ದ ಕಚೇರಿಯಲ್ಲಿಂದು ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳ ಕುರಿತು ಅಧಿಕಾರಿಗಳು ಮಂಗಳವಾರ ಸಂಪೂರ್ಣವಾಗಿ ಚರ್ಚಿಸಲಿದ್ದಾರೆ. ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚರ್ಚೆ ನಡೆಸಿ ಮೂರು ದಿನಗಳೊಳಗೆ ವರದಿ ನೀಡಲಿದ್ದಾರೆ. ವರದಿ ಆಧಾರದಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಸಚಿವರು ಹೇಳಿದರು.

ಮಂಗಳೂರು ಸ್ಮಾರ್ಟ್ ಸಿಟಿ- ಎಂ.ಡಿ.ಗೆ ಸಂಪೂರ್ಣ ಜವಾಬ್ದಾರಿ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯನ್ನು ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ತಯಾರು ಮಾಡಲಾಗುತ್ತಿದೆ. ಇದಕ್ಕಾಗಿ ಜನರೂ ಸ್ಮಾರ್ಟ್ ಆಗಬೇಕಾಗಿದೆ. ಜನರ ಸಹಭಾಗಿತ್ವವೂ ಅಗತ್ಯವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯನ್ನು ಪರಿಪೂರ್ಣವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಯೋಜನೆಯ ಆಡಳಿತ ನಿರ್ದೇಶಕರಿ(ಎಂ.ಡಿ.)ಗೆ ಸಂಪೂರ್ಣ ಜವಾಬ್ದಾರಿ ವಹಿಸಲಾಗುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಆಡಳಿತ ನಿರ್ದೇಶಕರು ಪ್ರತೀ 15 ದಿನಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಲು ಸೂಚಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿ ಮಾನವ ಸಂಪನ್ಮೂಲ ಭರ್ತಿಗೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಕನ್ಸಲ್ಟಂಟ್‌ನ್ನು ಹದ್ದುಬಸ್ತಿನಲ್ಲಿರಿಸಿ ಕೆಲಸ ಮಾಡಬೇಕು. ಕೆಲಸ ಸಮರ್ಪಕವಾಗಿ ನಡೆಸಲು ಎಸ್‌ಪಿವಿ ಎಂಡಿಗೆ ಅಧಿಕಾರ ನೀಡಲಾಗುವುದು. ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಡಳಿತ ಮಂಡಳಿ ಸಭೆ ನಡೆಸಬೇಕು. ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜತೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಸಭೆ ಮಾಡಿ ಮೇಲ್ವಿಚಾರಣಾ ಕೆಲಸ ಮಾಡಲಿದ್ದೇವೆ ಎಂದು ಸಚಿವ ಖಾದರ್ ಹೇಳಿದರು.

ಹೆದ್ದಾರಿಯಿಂದ- ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ

ಹೆದ್ದಾರಿಯಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಆ ನಿಟ್ಟಿನಲ್ಲಿ ತೊಕ್ಕೊಟ್ಟಿನಿಂದ ಜಪ್ಪಿನಮೊಗರು-ಮಹಾಕಾಳಿಪಡ್ಪು- ಮಾರ್ಗನ್ಸ್‌ಗೇಟ್ ರಸ್ತೆಯನ್ನು ಆರು ಪಥ ಅಥವಾ ಚತುಷ್ಪಥಗೊಳಿಸುವ ನಿಟ್ಟಿನಲ್ಲಿ ಸಂಸದರು, ಜನಪ್ರತಿನಿಧಿಗಳ ಜತೆ ರೈಲ್ವೇ ಸಚಿವರನ್ನು ಭೇಟಿಯಾಗಿ ಶೇ.50:50ರ ಅನುಪಾತದಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗುವುದು. ಅನುದಾನ ದೊರೆಯದಿದ್ದಲ್ಲಿ ರಾಜ್ಯ ಸರಕಾರ ಅಥವಾ ನಗರ ಪಾಲಿಕೆ ವತಿಯಿಂದ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮೇಯರ್ ಭಾಸ್ಕರ ಮೊಯ್ಲಿ, ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಸುದ್ದಿಗೋಷ್ಠಿಗೆ ಶಾಸಕರು, ಮೇಯರ್ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹೀಂ ಸೇರಿದಂತೆ ಇತರ ಅಧಿಕಾರಿಗಳ ಜತೆ ಸಭೆ ನಡೆಸಿದರು.


ಮೀನಿಗೆ ರಾಸಾಯನಿಕ ಬಳಕೆ: ಸತ್ಯಾಂಶ ಕಂಡುಹಿಡಿಯಲು ಕ್ರಮ

ಮೀನು ಕೆಡದಂತೆ ರಾಸಾಯನಿಕ ಬಳಕೆ ಮಾಡುತ್ತಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆಗೆ ತಿಳಿಸಲಾಗುವುದು. ಜಿಲ್ಲಾಧಿಕಾರಿ ಮೂಲಕ ಸತ್ಯಾಂಶವನ್ನು ಪತ್ತೆಹಚ್ಚಲಾಗುವುದು ಎಂದು ಹೇಳಿದರು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News