ಘನತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲೇ ಪ್ರಥಮ‌ ಸ್ಥಾನ ಪಡೆದ ಮಂಗಳೂರು

Update: 2018-06-25 13:56 GMT

ಮಂಗಳೂರು, ಜೂ.25: ಕೇಂದ್ರ ಸರಕಾರದ ಸ್ವಚ್ಛ ಭಾರತ ಮಿಷನ್ ಅಡಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮಂಗಳೂರು ಮಹಾ ನಗರಪಾಲಿಕೆ ಘನತ್ಯಾಜ್ಯ ನಿರ್ವಹಣೆಗಾಗಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವ ಹರ್‌ದೀಪ್ ಪುರಿ ಅವರಿಂದ ಮಂಗಳೂರು ಮೇಯರ್ ಕೆ.ಭಾಸ್ಕರ ಪ್ರಶಸ್ತಿ ಸ್ವೀಕರಿಸಿದರು. ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿಸೋಜಾ, ಆಯುಕ್ತ ಮುಹಮ್ಮದ್ ನಝೀರ್, ಪರಿಸರ ಅಭಿಯಂತರ ಮಧು ಮನೋಹರ್ ಉಪಸ್ಥಿತರಿದ್ದರು.

ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ, ನಿರ್ದೇಶಕ ವಿ.ಕೆ.ಜಿಂದಾಲ್ ಮುಖ್ಯ ಅತಿಥಿಗಳಾಗಿದ್ದರು.
 2017ರ ಸ್ವಚ್ಛ ಸರ್ವೇಕ್ಷಣೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ರಾಜ್ಯದ 27 ನಗರಗಳ ಪೈಕಿ ಮನಪಾ 2ನೇ ಸ್ಥಾನ ಹಾಗೂ ದೇಶದಲ್ಲಿ 63ನೇ ಸ್ಥಾನ ಗಳಿಸಿತ್ತು. 2018ರ ಸ್ವಚ್ಛ ಸರ್ವೇಕ್ಷಣೆ ಅಂಗವಾಗಿ ದೇಶದ 4,203 ನಗರಗಳಲ್ಲ್ಲಿ ಜನವರಿ 4ರಿಂದ ಮಾರ್ಚ್ 10ರವರೆಗೆ ಸಮೀಕ್ಷೆ ನಡೆದಿತ್ತು. 3ರಿಂದ 10 ಲಕ್ಷ ಜನಸಂಖ್ಯೆಯ ನಗರಗಳ ವಿಭಾಗದ ಘನತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರು ಮಹಾ ನಗರಪಾಲಿಕೆ ದೇಶದಲ್ಲೇ ಮೊದಲ ಸ್ಥಾನಿಯಾಗಿ ಆಯ್ಕೆಯಾಗಿತ್ತು.

ಪ್ರಶಸ್ತಿ ಆಯ್ಕೆಗೆ 3 ಹಂತಗಳಲ್ಲಿ ಒಟ್ಟು 4 ಸಾವಿರ ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳಿಗೆ 1,400 ಅಂಕ , ಸಾರ್ವಜನಿಕ ಅಭಿಪ್ರಾಯಕ್ಕೆ 1,400 ಹಾಗೂ ಕೇಂದ್ರ ತಂಡದಿಂದ ನೇರ ಸಮೀಕ್ಷೆಗೆ 1,200 ಅಂಕ ನಿಗದಿಯಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಸ್ವಚ್ಛತಾ ರಾಯಭಾರಿಯಾಗಿ ಜನಪ್ರಿಯ ನಟ ನವೀನ್ ಡಿ. ಪಡೀಲ್ ಅವರನ್ನು ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News