28 ಪೊಲೀಸ್ ಅಧಿಕಾರಿಗಳ ಬಂಧನ!

Update: 2018-06-25 17:05 GMT

ಮೆಕ್ಸಿಕೊ ಸಿಟಿ, ಜೂ. 25: ಮೆಕ್ಸಿಕೊದ ಒಕಾಂಪೊ ನಗರದ ಮುನಿಸಿಪಾಲಿಟಿಯ ಮೇಯರ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರ ಹತ್ಯೆಯಲ್ಲಿ ಶಾಮೀಲಾದ ಆರೋಪದಲ್ಲಿ ಮಿಕೋಕನ್ ರಾಜ್ಯದ 28 ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ವಿಚಾರಣೆಗಾಗಿ ಒಕಾಂಪೊದ ಮುನಿಸಿಪಲ್ ಪೊಲೀಸ್ ಇಲಾಖೆಯ ಎಲ್ಲ ಸದಸ್ಯರನ್ನು ಪೊಲೀಸ್ ಆಂತರಿಕ ವ್ಯವಹಾರಗಳ ಇಲಾಖೆ ವಶಕ್ಕೆ ತೆಗೆದುಕೊಂಡಿದೆ ಎಂದು ರವಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸ್ ನೀತಿ ಸಂಹಿತೆಯ ಸಂಭಾವ್ಯ ಉಲ್ಲಂಘನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ. ಆದರೆ, ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಒಕಾಂಪೊ ನಗರದ ಮೇಯರ್ ಹುದ್ದೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಫೆರ್ನಾಂಡೊ ಆ್ಯಂಜೆಲಿಸ್ ಜುವಾರೆಝ್ ಹತ್ಯೆಯಲ್ಲಿ ಶಾಮೀಲಾದ ಆರೋಪದಲ್ಲಿ ಪೊಲೀಸರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮೆಕ್ಸಿಕೊದ ಮಿಕೋಕನ್ ರಾಜ್ಯದ ಪುರ್ವದ ತುದಿಯಲ್ಲಿರುವ ಒಕಾಂಪೊ ನಗರದಲ್ಲಿ 24,000 ಜನಸಂಖ್ಯೆಯಿದೆ.

ರಾಜ್ಯದ ಆಡಳಿತಾರೂಢ ಪಕ್ಷ ಡೆಮಾಕ್ರಟಿಕ್ ರೆವಲೂಶನ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಜುವಾರೆಝ್‌ರನ್ನು ಗುರುವಾರ ಗುಂಡು ಹಾರಿಸಿ ಕೊಲ್ಲಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News