13,000ಕ್ಕೂ ಅಧಿಕ ವಲಸಿಗರನ್ನು ಸಹಾರಾ ಮರುಭೂಮಿಗೆ ಅಟ್ಟಿದ ಅಲ್ಜೀರಿಯ

Update: 2018-06-25 15:58 GMT

ಅಸ್ಸಾಮಕ (ನೈಜರ್), ಜೂ. 25: ಅಲ್ಜೀರಿಯ ದೇಶವು ಕಳೆದ 14 ತಿಂಗಳ ಅವಧಿಯಲ್ಲಿ 13,000ಕ್ಕೂ ಅಧಿಕ ವಲಸಿಗರನ್ನು ಸಹಾರಾ ಮರುಭೂಮಿಯಲ್ಲಿ ಬಿಟ್ಟಿದೆ. ವಲಸಿಗರನ್ನು ಆಹಾರ, ನೀರು ಕೊಡದೆ ಮರುಭೂಮಿಯಲ್ಲಿ ಬಿಟ್ಟಿದ್ದು, ಅವರು ಹಲವು ದಿನಗಳ ಕಾಲ ಮರುಭೂಮಿಯಲ್ಲಿ ಅಲೆದಾಡುವ ಪರಿಸ್ಥಿತಿ ಉಂಟಾಗಿತ್ತು.

ಹೀಗೆ ಮರುಭೂಮಿಯಲ್ಲಿ ಅಲೆದಾಡಿದವರಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಗಡಿಪಾರಾಗಿ ಬದುಕುಳಿದ ಎರಡು ಡಝನ್‌ಗೂ ಅಧಿಕ ಸಂತ್ರಸ್ತರನ್ನು ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆ ನೈಜರ್‌ನಲ್ಲಿ ಸಂದರ್ಶಿಸಿತು.

ಮರುಭೂಮಿಯ 48 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ನಡೆಯುತ್ತಿದ್ದಾಗ ಹಲವಾರು ವಲಸಿಗರು ಕುಸಿದು ಬಿದ್ದಿರುವುದನ್ನು ತಾವು ನೋಡಿದೆವು ಎಂದು ಅವರೆಲ್ಲರೂ ಹೇಳಿದರು.

ಹಾಗೆ ಕುಸಿದುಬಿದ್ದ ವಲಸಿಗರನ್ನು ತಾವು ಮತ್ತೆ ನೋಡಿಲ್ಲ ಎಂದು ಅವರು ಹೇಳಿದ್ದಾರೆ.

ಅದೃಷ್ಟವಂತರು ಕೆಲವು ಗಂಟೆಗಳ ಕಾಲ ನಡೆದು ಗಡಿಯಾಚೆಯ ನೈಜರ್ ಮತ್ತು ಮಾಲಿ ದೇಶಗಳ ಹಳ್ಳಿಗಳನ್ನು ತಲುಪಿದರು. ಆದರೆ, ಇನ್ನು ಹಲವರು ದಿನಗಳ ಕಾಲ ಅಲೆದಾಡಿದ್ದಾರೆ.

ವಲಸಿಗರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಅಲ್ಜೀರಿಯ ಹೇಳಿಕೊಂಡಿದೆ.

ಆದರೆ, ಅಸೋಸಿಯೇಟಡ್ ಪ್ರೆಸ್ ಸಂಗ್ರಹಿಸಿದ ವೀಡಿಯೊಗಳು ಬದುಕುಳಿದ ವಲಸಿಗರ ಹೇಳಿಕೆಗಳನ್ನು ದೃಢಪಡಿಸುತ್ತವೆ. ನೂರಾರು ಜನರು ಮರುಭೂಮಿಯಲ್ಲಿ ನಡೆಯುತ್ತಿರುವುದನ್ನು ಈ ವೀಡಿಯೊಗಳು ತೋರಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News