ತುರ್ತುಸ್ಥಿತಿಗಿಂತ ದೇಶದಲ್ಲಿ ಈಗಿರುವ ಅಘೋಷಿತ ತುರ್ತುಸ್ಥಿತಿ ಅಪಾಯಕಾರಿ
ಜೈಪುರ, ಜೂ.25: ಬಜೆಪಿಗೆ ತಾನು ರಾಜೀನಾಮೆ ನೀಡಿದ್ದು, ಇನ್ನು ಮುಂದೆ ರಾಜಸ್ಥಾನ ಮತ್ತು ದೇಶದ ಮೇಲೆ ಹೇರಲಾಗಿರುವ ಅಘೋಷಿತ ತುರ್ತುಸ್ಥಿತಿಯ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಬಿಜೆಪಿಯ ಬಂಡಾಯ ನಾಯಕ ಘನಶ್ಯಾಮ್ ತಿವಾರಿ ಸೋಮವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ರೈತರ ಸಮಸ್ಯೆ, ಮೇಲ್ವರ್ಗದ ಸಮುದಾಯಗಳಿಗೆ ಮೀಸಲಾತಿ ಹಾಗೂ ಭ್ರಷ್ಟಾಚಾರ ಮುಂತಾದ ವಿಷಯಗಳಲ್ಲಿ ತಿವಾರಿ ರಾಜಸ್ಥಾನದ ವಸುಂಧರಾ ರಾಜೆ ಸರಕಾರದೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ರಾಜಸ್ಥಾನ ಬಿಜೆಪಿಯು ಮಾಫಿಯಾಗಳು ಮತ್ತು ಚೇಲಾಗಳ ವಿಭಾಗವಾಗಿದೆ ಎಂದು ತಿವಾರಿ ಆರೋಪಿಸಿದ ಹಿನ್ನೆಲೆಯಲ್ಲಿ ಅವರಿಗೆ ಪಕ್ಷವು ನೊಟೀಸ್ ಜಾರಿ ಮಾಡಿತ್ತು.
ತಿವಾರಿಯವರ ಪುತ್ರ ಅಖಿಲೇಶ್ ಭಾರತ ವಾಹಿನಿ ಪಕ್ಷ ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು ಆಮೂಲಕ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 200 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ತಿವಾರಿ, “ಅಘೋಷಿತ ತುರ್ತುಸ್ಥಿತಿ ನಿಜವಾದ ತುರ್ತುಸ್ಥಿತಿಗಿಂತ ಅಪಾಯಕಾರಿ. ನಾನು ಎರಡೂ ಹಂತಗಳನ್ನು ನೋಡಿದ್ದು ಇದರ ವಿರುದ್ಧ ಹೋರಾಡಲು ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಸದ್ಯ ತುರ್ತುಸ್ಥಿತಿ ಹೇರುವುದು ಸಾಧ್ಯವಿಲ್ಲವಾದರೂ ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯಿದೆ ಎಂದು ತಿವಾರಿ ತಿಳಿಸಿದ್ದಾರೆ. 2013ರಲ್ಲಿ ರಾಜ್ಯದ ಜನರು ಬಿಜೆಪಿಗೆ ಮತಹಾಕಿ ಗೆಲ್ಲಿಸಿದ್ದರು. ರಾಜ್ಯದ 25 ಲೋಕಸಭಾ ಕ್ಷೇತ್ರಗಳಲ್ಲೂ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ .ಆದರೆ ಪಕ್ಷವು ಜನರನ್ನು ವಂಚಿಸಿದೆ ಎಂದು ಅವರು ಆರೋಪಿಸಿದ್ದಾರೆ.