ಯುಎಇ ಔಟ್‌ಪಾಸ್‌ನಿಂದ ಸಾವಿರಾರು ಭಾರತೀಯರಿಗೆ ಲಾಭ

Update: 2018-06-25 17:20 GMT

#ವೀಸಾ ಇಲ್ಲದೆ ನೆಲೆಸಿರುವವರಿಗೆ ಶುಭಸುದ್ದಿ

ದುಬೈ, ಜೂ. 25: ವೀಸಾವಿಲ್ಲದೆ ಅಕ್ರಮವಾಗಿ ವಾಸಿಸಿ ವಿವಿಧ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿಯರಿಗೆ ಕ್ಷಮಾದಾನ ನೀಡಿ ಅವರನ್ನು ತಾಯ್ನಾಡಿಗೆ ಕಳುಹಿಸುವ ಯುಎಇ ಸರಕಾರದ ನಿರ್ಧಾರವು ಫಲಾನುಭವಿಗಳಿಗೆ ಹರ್ಷ ತರಿಸಿದೆ.

  ಆಗಸ್ಟ್ ಒಂದರಿಂದ ಅಕ್ಟೋಬರ್ 31ರವರೆಗೆ ಕ್ಷಮಾದಾನದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ದಾಖಲೆಗಳಿಲ್ಲದವರು ಈ ವೇಳೆಯಲ್ಲಿ ತಮ್ಮ ದಾಖಲೆಗಳನ್ನು ಸರಿಪಡಿಸಿ ಇಲ್ಲಿಯೇ ಮುಂದುವರಿಯುವ ಅವಕಾಶ ಇದೆ. ಅಥವಾ ಸರಕಾರದ ಸಹಕಾರದಲ್ಲಿ ಊರಿಗೆ ವಿಮಾನ ಏರಬಹುದಾಗಿದೆ. ಪ್ರಕೃತಿ ವಿಕೋಪ ಹಾಗೂ ಯುದ್ಧಗಳಿಂದ ಸಂತ್ರಸ್ತರಾದವರಿಗೆ ಒಂದು ವರ್ಷದ ವಾಸ್ತವ್ಯ ವೀಸಾ ನೀಡುವ ಇಲ್ಲಿನ ಸರಕಾರದ ಮಾನವೀಯ ಕ್ರಮಗಳೂ ವ್ಯಾಪಕ ಅಭಿನಂದನೆಗೆ ಪಾತ್ರವಾಗಿವೆ.

"ವೀಸಾ ಸರಿಪಡಿಸಿ, ಸ್ವಯಂ ರಕ್ಷಿಸಿ" ಎಂಬ ಘೋಷವಾಕ್ಯದೊಂದಿಗೆ ಈ ಅಭಿಯಾನ ಆರಂಭವಾಗಿದೆ. ಮುಂಬರುವ ಕೆಲವು ವಾರಗಳಲ್ಲಿ ಸಾರ್ವಜನಿಕ ಕ್ಷಮೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಗುರುತು ಹಾಗೂ ಪೌರತ್ವ ಒಕ್ಕೂಟ ಪ್ರಾಧಿಕಾರ ತಿಳಿಸಿದೆ. ಸಾವಿರಾರು ಭಾರತೀಯರು ಸೇರಿದಂತೆ ಹಲವು ದೇಶಗಳ ಜನರು ಇಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿ ಹಲವು ರೀತಿಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸರಕಾರದ ಘೋಷಣೆಯಿಂದ ಅವರೆಲ್ಲರೂ ಪುಳಕಿತಗೊಂಡಿದ್ದಾರೆ. 2013ರಲ್ಲಿ ಯುಎಇಯಲ್ಲಿ ಕೊನೆಯ ಸಾರ್ವಜನಿಕ ಕ್ಷಮೆ ಘೋಷಣೆಯಾಗಿತ್ತು. ಪಾಸ್ ಪೋರ್ಟ್ ಎಂಬ ಅತಿ ಮೂಲಭೂತ ದಾಖಲೆಯೂ ಇಲ್ಲದೆ ಇಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸರಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವ ಸುಸಂದರ್ಭ ಇದಾಗಿದೆ. 2013ರಲ್ಲಿ ಸಾರ್ವಜನಿಕ ಕ್ಷಮೆ ಘೋಷಣೆಯಾದಾಗ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇದರ ಲಾಭವನ್ನು ಗಿಟ್ಟಿಸಿಕೊಂಡಿದ್ದರು. ಆಗ ಯುಎಇ ಬಿಟ್ಟ ಭಾರತೀಯರ ಪೈಕಿ ಬಹುಪಾಲು ಮಂದಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಉತ್ತರ ಭಾರತದ ನೌಕರರಾಗಿದ್ದರು. ಅಬುದಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈಯಲ್ಲಿನ ಭಾರತೀಯ ಕಾನ್ಸುಲೇಟ್‌ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಫಲಾನುಭವಿಗಳಿಗೆ ಅತೀ ಹೆಚ್ಚಿನ ರೀತಿಯ ಸಹಾಯ-ಸಹಕಾರವನ್ನು ಒದಗಿಸಿಕೊಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಔಟ್‌ಪಾಸ್ ಎಲ್ಲಿ ಪಡೆಯಬಹುದು?

ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ದುಬೈಯಲ್ಲಿನ ಭಾರತೀಯ ಕಾನ್ಸುಲೇಟ್‌ಗೆ ಮುಖತಃ ಭೇಟಿ ನೀಡಿ ಅಲ್ಲಿಂದ ಔಟ್‌ಪಾಸ್ ಪಡೆದು ಭಾರತಕ್ಕೆ ವಿಮಾನವೇರುವ ಅವಕಾಶ ಫಲಾನುಭವಿಗಳಿಗಿದೆ. ಇದಕ್ಕೆ ಕೆಲವೇ ದಿನಗಳು ಮಾತ್ರವೇ ತಗಲಲಿದ್ದು, ಅಗತ್ಯ ಮಾರ್ಗದರ್ಶನಗಳನ್ನು ಭಾರತೀಯ ಅಧಿಕಾರಿಗಳಿಂದ ಹಾಗೂ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳಿಂದ ಪಡೆದುಕೊಳ್ಳಬಹುದಾಗಿದೆ. ಔಟ್‌ಪಾಸ್ ಪಡೆಯದೆ ಇಲ್ಲಿಯೇ ಅನಧಿಕೃತವಾಗಿ ನೆಲೆಸಲು ಉದ್ದೇಶಿಸುವವರಿಗೆ ಭಾರೀ ಪ್ರಮಾಣದ ಶಿಕ್ಷೆಯೂ ಕಾದಿದೆ ಎಂದು ಯುಎಇ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಭಾರತೀಯ ಸಂಘಟನೆಗಳಿಂದ ಹೆಲ್ಪ್ ಡೆಸ್ಕ್

ಯುಎಇಯಲ್ಲಿ ಔಟ್‌ಪಾಸ್ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಮಾರ್ಗದರ್ಶನ ನೀಡಲು ಯುಎಇಯ ಸಾಮಾಜಿಕ ಸಂಘಟನೆಗಳಾದ ಐಸಿಎಫ್, ಕೆಸಿಎಫ್, ಕೆಎಂಸಿಸಿ, ಇಂಡಿಯನ್ ಫ್ರಟರ್ನಿಟಿ ಫಾರಂ, ಕನ್ನಡ ಸಂಘಟನೆಗಳು ಮುಂದೆ ಬಂದಿದ್ದು, ಸಹಾಯವಾಣಿಯನ್ನು ತೆರೆಯುವುದಾಗಿಯೂ ಘೋಷಿಸಿವೆ.

Writer - ವರದಿ: ಸಿರಾಜ್ ಅರಿಯಡ್ಕ

contributor

Editor - ವರದಿ: ಸಿರಾಜ್ ಅರಿಯಡ್ಕ

contributor

Similar News