ಮನೆ ಮುಂದೆ ಬೈಕ್ ಚಲಾಯಿಸಿದ್ದಕ್ಕೆ ದಲಿತ ವ್ಯಕ್ತಿಗೆ ಥಳಿತ: ಆರೋಪ

Update: 2018-06-25 16:31 GMT

ತಿಕಮ್‌ಗಡ್ (ಮ.ಪ್ರ),ಜೂ.25: ಗ್ರಾಮದ ಮುಖ್ಯಸ್ಥನ ಮನೆಯ ಮುಂದೆ ಬೈಕ್ ಚಲಾಯಿಸಿದ ಎಂಬ ಕಾರಣಕ್ಕೆ ಮೂವತ್ತರ ಹರೆಯದ ದಲಿತ ವ್ಯಕ್ತಿಗೆ ಥಳಿಸಿದ ಘಟನೆ ಮಧ್ಯ ಪ್ರದೇಶದ ಧರಮ್‌ಪುರದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಘಟನೆಯ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಧರಮ್‌ಪುರ ಗ್ರಾಮದ ಮುಖ್ಯಸ್ಥ ಹಾಗೂ ಇತರ ನಾಲ್ವರನ್ನು ಬಂಧಿಸಿದ್ದಾರೆ. ಘಟನೆಯ ಸಂತ್ರಸ್ತ ದಯಾರಾಮ್ ಅಹಿರ್ವಾರ್ ನೀಡಿರುವ ದೂರಿನಲ್ಲಿ, “ನಾನು ಜೂನ್ 21ರಂದು ಮೋಟಾರ್ ಸೈಕಲ್‌ನಲ್ಲಿ ಗ್ರಾಮದ ಮುಖ್ಯಸ್ಥ ಹೇಮಂತ್ ಕುರ್ಮಿಯವರ ಮನೆಯ ಮುಂದೆ ಸಾಗಿದ ಕಾರಣಕ್ಕೆ ಕುರ್ಮಿ ಹಾಗೂ ಅವರ ಸಹೋದರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ. “ನಾನು ಗ್ರಾಮ ಮುಖ್ಯಸ್ಥರ ಮನೆಯ ಮುಂದೆ ಬೈಕ್ ಚಲಾಯಿಸಬಾರದಿತ್ತು. ಬದಲಿಗೆ ಅದನ್ನು ದೂಡಿಕೊಂಡು ಸಾಗಬೇಕಿತ್ತು ಎಂದು ಆರೋಪಿಗಳು ತಾಕೀತು ಮಾಡಿದ್ದರು” ಎಂದು ದಯಾರಾಮ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದು ಎರಡು ದಿನಗಳ ನಂತರ ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅದರಲ್ಲಿ ಕುರ್ಮಿ ಹಾಗೂ ಆತನ ಸಹೋದರರು ದಯಾರಾಮ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸುವುದು ಸೆರೆಯಾಗಿದೆ. ಸಂತ್ರಸ್ತ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಾದ ಹೇಮಂತ ಕುರ್ಮಿ, ವಿನೋದ್ ಕುರ್ಮಿ, ಮುನ್ನು ಕುರ್ಮಿ ಹಾಗೂ ಅನಿರುದ್ಧ್ ಕುರ್ಮಿಯನ್ನು ಬಂಧಿಸಿದ್ದಾರೆ. ಜೊತೆಗೆ ನೆರೆಮನೆ ನಿವಾಸಿ ದಿನೇಶ್ ಯಾದವ್‌ನನ್ನೂ ವಶಕ್ಕೆ ಪಡೆಯಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News