ಹಝಾರೆಯನ್ನು ಹತ್ಯೆ ಮಾಡುವ ಸಂಚಿನ ವಿರುದ್ಧದ 2009ರ ದೂರನ್ನು ಸಿಐಡಿ ತನಿಖೆ ನಡೆಸುತ್ತಿದೆ: ಆರ್‌ಟಿಐ

Update: 2018-06-25 16:32 GMT

ಒಸ್ಮಾನಾಬಾದ್, ಜೂ.25: ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಮಾಜಿ ರಾಜ್ಯ ಸಚಿವ ಪದ್ಮಸಿನ್ಹ ಪಾಟಿಲ್ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ 2009ರಲ್ಲಿ ನೀಡಿದ್ದ ದೂರಿನ ತನಿಖೆಯನ್ನು ಮಹಾರಾಷ್ಟ್ರ ಸಿಐಡಿ ನಡೆಸುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ವಿವರಣೆಯಲ್ಲಿ ತಿಳಿಸಲಾಗಿದೆ.

ತನ್ನನ್ನು ಹತ್ಯೆ ಮಾಡಲು ಪರಸ್ಮಲ್ ಜೈನ್ ಎಂಬಾತನಿಗೆ ಸುಪಾರಿ ನೀಡಲಾಗಿದೆ ಎಂದು ಹಝಾರೆ 2009ರ ಸೆಪ್ಟೆಂಬರ್‌ನಲ್ಲಿ ಪಾಟೀಲ್ ಹಾಗೂ ಇತರ ನಾಲ್ವರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಾಟೀಲ್‌ರನ್ನು ಬಂಧಿಸಲಾಗಿದ್ದರೂ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಅಹಮದಾಬಾದ್ ಜಿಲ್ಲೆಯ ಪರ್ನೆರ್ ಪೊಲೀಸ್ ಠಾಣೆಯಿಂದ ಪ್ರಕರಣವನ್ನು ವರ್ಗಾಯಿಸಿಕೊಂಡ ಅಪರಾಧ ತನಿಖಾ ವಿಭಾಗ (ಸಿಐಡಿ) ಇನ್ನಷ್ಟೇ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿಸಲಾಗಿದೆ.

ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ 2006ರ ಜೂನ್ 3ರಂದು ನವಿ ಮುಂಬೈಯ ಕಲಂಬೊಲಿಯಲ್ಲಿ ಕಾಂಗ್ರೆಸ್ ನಾಯಕ ಪವನ್‌ರಾಜೆ ನಿಂಬಾಳ್ಕರ್‌ರನ್ನು ಹತ್ಯೆ ಮಾಡಿದ ಆರೋಪದಲ್ಲಿ ಪದ್ಮಸಿನ್ಹ ಪಾಟೀಲ್ ಈಗಾಗಲೇ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಪವನ್‌ರಾಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಪರಸ್ಮಲ್ ಜೈನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಪವನ್‌ರಾಜೆ ಹಾಗೂ ಹಝಾರೆಯನ್ನು ಹತ್ಯೆ ಮಾಡಲು ನನಗೆ ಪಾಟೀಲ್ ಮೂವತ್ತು ಲಕ್ಷ ರೂ. ನೀಡಿದ್ದಾರೆ ಎಂದು ಒಪ್ಪಿಕೊಂಡಿದ್ದ. ಆದರೆ ತಾನು ಹಝಾರೆಯನ್ನು ಹತ್ಯೆ ಮಾಡಲು ಹಣವನ್ನು ಪಡೆಯಲು ನಿರಾಕರಿಸಿದ್ದೆ ಎಂದು ಆತ ತಿಳಿಸಿದ್ದ. ಹಝಾರೆ ಹತ್ಯೆ ಸಂಚು ದೂರಿನ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿಯಲು ಇತ್ತೀಚೆಗೆ ಪವನ್‌ರಾಜೆ ಅವರ ಪುತ್ರ ಜೈರಾಜೆ ನಿಂಬಾಳ್ಕರ್ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News