ಸಾಮಾಜಿಕ ಜಾಲತಾಣದಲ್ಲಿ ನಿಂದನೆ: ಸುಶ್ಮಾ ಸ್ವರಾಜ್ ಬೆಂಬಲಕ್ಕೆ ನಿಂತ ಕಾಂಗ್ರೆಸ್; ಮೌನಕ್ಕೆ ಜಾರಿದ ಬಿಜೆಪಿ

Update: 2018-06-25 18:29 GMT

ಹೊಸದಿಲ್ಲಿ, ಜೂ.25: ಅಂತರ್‌ಧರ್ಮೀಯ ವಿವಾಹವಾದ ದಂಪತಿಗೆ ಪಾಸ್‌ಪೋರ್ಟ್ ನೀಡದ ಅಧಿಕಾರಿಯನ್ನು ವರ್ಗಾಯಿಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಲವರಿಂದ ನಿಂದನೆಗೆ ಗುರಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಧಾವಿಸಿದರೆ, ಬಿಜೆಪಿ ಮತ್ತು ಅದರ ಸಚಿವರುಗಳು ಮೌನಕ್ಕೆ ಜಾರಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್, ಪರಿಸ್ಥಿತಿ ಮತ್ತು ಕಾರಣ ಏನೇ ಇರಲಿ, ಹಿಂಸೆ, ಅಗೌರವ ಮತ್ತು ನಿಂದನೆಯ ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಸುಶ್ಮಾ ಸ್ವರಾಜ್ ಅವರೇ, ನಿಮ್ಮದೇ ಪಕ್ಷದ ಸದಸ್ಯರು ಮಾಡಿರುವ ಹೀನಾಯ ನಿಂದನಾತ್ಮಕ ಟ್ವೀಟ್‌ಗಳ ವಿರುದ್ಧ ನೀವು ಧ್ವನಿಯೆತ್ತಿರುವುದಕ್ಕೆ ನಾನು ನಿಮ್ಮನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದೆ.

ಮುಹಮ್ಮದ್ ಅನಸ್ ಸಿದ್ದಿಕಿ ಹಾಗೂ ತನ್ವಿ ಸೇಠ್ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದರು. “ಪಾಸ್‌ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ ನಮ್ಮನ್ನು ಎಲ್ಲರೆದುರು ನಿಂದಿಸಿದ್ದಾರೆ”. ಅವರು ನನ್ನ ಪತಿಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ತಿಳಿಸಿದ್ದಾರೆ ಮತ್ತು ನಾನು ಮುಸ್ಲಿಮ್ ವ್ಯಕ್ತಿಯನ್ನು ವಿವಾಹವಾಗಿರುವುದಕ್ಕೆ ನನ್ನನ್ನು ಎಲ್ಲರೆದುರು ನಿಂದಿಸಿದ್ದಾರೆ ಎಂದು ತನ್ವಿ ಸೇಠ್ ಟ್ವಿಟರ್‌ನಲ್ಲಿ ಆರೋಪಿಸಿದ್ದು, ಸಚಿವೆ ಸ್ವರಾಜ್‌ರನ್ನೂ ಟ್ಯಾಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ವಿಕಾಸ್ ಮಿಶ್ರಾ ಅವರನ್ನು ವರ್ಗಾವಣೆಗೊಳಿಸಲಾಗಿತ್ತು.

ವಿದೇಶಾಂಗ ಸಚಿವಾಲಯದ ಈ ಕ್ರಮವನ್ನು ವಿರೋಧಿಸಿ ಹಲವರು ಸುಶ್ಮಾ ಸ್ವರಾಜ್ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದರು. ರವಿವಾರದಂದು ಸಚಿವೆ ಇವುಗಳಲ್ಲಿ ಕೆಲವು ಟ್ವೀಟ್‌ಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News