ಮಿಶನ್ ಅಂತ್ಯೋದಯ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ, ಎಟಿಎಂ ತೆರೆಯಲು ಸೂಚನೆ

Update: 2018-06-26 11:21 GMT

ಮಂಗಳೂರು, ಜೂ.26: ಕೇಂದ್ರ ಸರಕಾರದ ಮಿಶನ್ ಅಂತ್ಯೋದಯ ಯೋಜನೆಯಡಿ ಆಯ್ಕೆಯಾದ ದ.ಕ. ಜಿಲ್ಲೆಯ 97 ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಅಥವಾ ಎಟಿಎಂಗಳನ್ನು ತೆರೆಯಲು ಬ್ಯಾಂಕುಗಳು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಲೋಕೇಶ್ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದ.ಕ. ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಕೇಂದ್ರ ಸರಕಾರದ ಆದರ್ಶ ಗ್ರಾಮ ಯೋಜನೆ ಮಾದರಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಮಿಶನ್ ಅಂತ್ಯೋದಯ ಯೋಜನೆಯಡಿ ದ.ಕ. ಜಿಲ್ಲೆಯ 97 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಒಟ್ಟು ಗ್ರಾಮಗಳಲ್ಲಿ 39 ಗ್ರಾಮಗಳಲ್ಲಿ ಎಟಿಎಂ ಇಲ್ಲವಾಗಿದ್ದು, 22 ಗ್ರಾಮಗಳು ಬ್ಯಾಂಕ್ ಶಾಖೆಯನ್ನು ಹೊಂದಿಲ್ಲ. ಈ ಬಗ್ಗೆ ಬ್ಯಾಂಕುಗಳು ಆಸಕ್ತಿ ವಹಿಸಬೇಕು ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಒಟ್ಟು 649 ಬ್ಯಾಂಕ್ ಶಾಖೆಗಳನ್ನು ಹೊಂದಿದ್ದು, 41,762.23 ಕೋಟಿ ರೂ. ಠೇವಣಿಯನ್ನು ಹೊಂದಿದೆ. 2018ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕುಗಳಿಂದ 65,680.11 ಕೋಟಿ ರೂ. ವ್ಯವಹಾರ ದಾಖಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ತಿಳಿಸಿದರು.

ಮುದ್ರಾ ಸಾಲ ನಿರಾಕರಿಸುವಂತಿಲ್ಲ: ಸಂಸದ ನಳಿನ್

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಂದ ಈವರೆಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ನೀಡಲಾದ ಸಾಲದ ಮಾಹಿತಿ ಪಡೆದರು.

ಬ್ಯಾಂಕ್‌ಗಳನ್ನುದ್ದೇಶಿಸಿ ಮಾತನಾಡಿದ ಅವರು, ಮುದ್ರಾ ಯೋಜನೆಯಡಿ ಸಾಲವನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ ಎಂಬ ದೂರು ಇದೆ. ಮಾತ್ರವಲ್ಲದೆ, ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಯ ಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆಯೂ ದೂರುಗಳು ಕೇಳುತ್ತಿವೆ ಎಂದರು.

ಮುದ್ರಾ ಸಾಲ ಯೋಜನೆಗೆ ಸಂಬಂಧಿಸಿ ಸಿಂಡಿಕೇಟ್, ಎಸ್‌ಬಿಐ, ಕರ್ನಾಟಕ ಬ್ಯಾಂಕ್‌ಗಳು ತಮ್ಮ ಸಾಧನೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆಂದು ಸೂಚನೆ ನೀಡಿದ ಸಂಸದ ನಳಿನ್, ಯಾವುದೇ ಕಾರಣಕ್ಕೂ ಬ್ಯಾಂಕ್‌ಗಳು ಮುದ್ರಾ ಸಾಲ ಯೋಜನೆಯನ್ನು ನಿರಾಕರಿಸಬಾರದು ಎಂದು ತಾಕೀತು ಮಾಡಿದರು.

ಇದೀಗ ಸಣ್ಣ ನೀರಾವರಿ ಹೊರತುಪಡಿಸಿ ಕೃಷಿ ಸಾಲವನ್ನೂ ಮುದ್ರಾ ಸಾಲದಡಿ ನೀಡಲು ಅವಕಾಶವಿದೆ. ಈ ಬಗ್ಗೆ ಬ್ಯಾಂಕುಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಫ್ರಾನ್ಸಿಸ್ ತಿಳಿಸಿದರು.

ಪ್ರಧಾನ ಮಂತ್ರಿ ಆವಾಝ್ ಯೋಜನೆಯಡಿ ಗೃಹ ಸಾಲಕ್ಕೆ ಬ್ಯಾಂಕುಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಈ ಸಂದರ್ಭ ಹೇಳಿದರು.

ಸಭೆಯಲ್ಲಿ ಆರ್‌ಬಿಐನ ಎಜಿಎಂ ಪಿ.ಕೆ. ಪಟ್ನಾಯಕ್, ನಬಾರ್ಡ್‌ನ ಎಜಿಎಂ ರಮೇಶ್, ಸಿಂಡಿಕೇಟ್ ಬ್ಯಾಂಕ್‌ನ ರೀಜಿನಲ್ ಮ್ಯಾನೇಜರ್ ತಿಮ್ಮಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News