ಮಂಗಳೂರು; ಕೊಲೆಯತ್ನ ಅಪರಾಧಿಗೆ 5ವರ್ಷ ಜೈಲುಶಿಕ್ಷೆ, 25ಸಾವಿರ ದಂಡ

Update: 2018-06-26 13:16 GMT

ಮಂಗಳೂರು, ಜೂ.26: ಹಣಕಾಸಿನ ವಿವಾದದಲ್ಲಿ ಸಂಬಂಧಿಯನ್ನು ಕೊಲೆಗೈಯಲು ಯತ್ನಿಸಿದ ಅಪರಾಧಕ್ಕಾಗಿ ಓರ್ವನಿಗೆ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲುಶಿಕ್ಷೆ ಹಗೂ 25 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಲಾರಿಯೊಂದಕ್ಕೆ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಮೂಡುಬಿದಿರೆಯ ಸಮೀಪದ ಗಂಟಲ್‌ಕಟ್ಟೆ ನೀರಳಿಕೆ ನಿವಾಸಿ ಬಾವು ಯಾನೆ ಹಸನಬ್ಬ(45) ಶಿಕ್ಷೆಗೊಳಗಾದವರು.

ಮೂಡುಬಿದಿರೆಯ ಪ್ರಾಂತ ಗ್ರಾಮದ ನಿವಾಸಿ ಮುಹಮ್ಮದ್ ಅಲ್ತಾಫ್ ರಿಕ್ಷಾ ಚಾಲಕನಾಗಿದ್ದು, ಆರೋಪಿ ಹಸನಬ್ಬ ಈತನ ಸೋದರ ಸಂಬಂಧಿಯಾಗಿದ್ದಾನೆ. ಹಸನಬ್ಬ ಟಿವಿಯನ್ನು ಖರೀದಿಸುವ ಸಲುವಾಗಿ ಅಲ್ತಾಫ್‌ನ ಸಹಾಯ ಕೋರಿದ್ದ. ಈ ಹಿನ್ನೆಲೆಯಲ್ಲಿ ಹಸನಬ್ಬ ಅಲ್ತಾಫ್ ಜು.27, 2013 ರಂದು ಮೂಡುಬಿದಿರೆಯ ಇಲೆಕ್ಟ್ರಾನಿಕ್ಸ್ ಸಂಸ್ಥೆಯೊಂದರಿಂದ ಮುಂಗಡವಾಗಿ 2ಸಾವಿರ ರೂ. ನೀಡಿ 21 ಸಾವಿರ ರೂ. ಬೆಲೆಯ ಎಲ್‌ಸಿಡಿ ಟಿವಿ ಖರೀದಿಸಲು ಹಸನಬ್ಬನಿಗೆ ನೀಡಿದ್ದ. ಉಳಿದ ಹಣವನ್ನು ಖಾಸಗಿ ಹಣಕಾಸು ಸಂಸ್ಥೆಯಿಂದ ಪಡೆಯಲಾಗಿತ್ತು. ಇದರ ತಿಂಗಳ ಕಂತಿನ 1,161 ರೂ. ಕೊಡುತ್ತೇನೆಂದು ಹಸನಬ್ಬ ಒಪ್ಪಿಕೊಂಡಿದ್ದರೂ ಏಳು ತಿಂಗಳ ಕಂತಿನ ಹಣವನ್ನು ಅಲ್ತಾಫ್‌ನೇ ನೀಡಿದ್ದ. ಈ ನಡುವೆ ಅಲ್ತಾಫ್ ಕಂತಿನ ಹಣವನ್ನು ನೀಡಬೇಕೆಂದು ಕೇಳಿದರೂ ಹಸನಬ್ಬ ನೀಡಿರಲಿಲ್ಲ.

ಹಣಕಾಸಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅಲ್ತಾಫ್ ಕೂಡ ಸಾಲದ ಕಂತನ್ನು ಪಾವತಿಸದ ಕಾರಣ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗೆ ಹೇಳಿದ್ದ. ತನ್ನದೇ ರಿಕ್ಷಾದಲ್ಲಿ ಅವರನ್ನು ಹಸನಬ್ಬನ ಮನೆಗೆ ಕರೆದುಕೊಂಡು ಹೋಗಿ ಟಿವಿಯನ್ನು ಮುಟ್ಟುಗೋಲು ಹಾಕುವಂತೆ ಮಾಡಿದ್ದ. ಈ ವಿಚಾರದಲ್ಲಿ ಹೆಂಡತಿ ಫೋನಿನ ಮೂಲಕ ಹಸನಬ್ಬನಿಗೆ ತಿಳಿಸಿದ್ದಾಳೆ. ಕೋಪಗೊಂಡ ಆತ ಅದೇ ದಿನ ತಾನು ದುಡಿಯುತ್ತಿದ್ದ ಲಾರಿಯನ್ನು ಅಲ್ತಾಫ್ ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಸಿ ಕೊಲೆಗೈಯಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.

ಪ್ರಕರಣವನ್ನು ಮೊದಲಿಗೆ ಅಪಘಾತ ಎಂಬುದಾಗಿ ಪರಿಗಣಿಸಲಾಗಿತ್ತಾದರೂ ಬಳಿಕ ಕೊಲೆ ಯತ್ನ ಪ್ರಕರಣ ಎಂದು ಮೂಡುಬಿದಿರೆಯ ಠಾಣೆಯಲ್ಲಿ ದೂರು ದಾಖಲಾಯಿತು. ಮೂಡುಬಿದಿರೆ ಠಾಣೆಯ ಅಂದಿನ ಸಬ್‌ಇನ್‌ಸ್ಪೆಕ್ಟರ್ ರಮೇಶ್‌ಕುಮಾರ್ ದೋಷಾರೋಪಣಾ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.
ನ್ಯಾಯಾಧೀಶ ಮುರಳೀಧರ ಪೈ ಬಿ. ಒಟ್ಟು 20 ಸಾಕ್ಷಿಗಳ ಹೇಳಿಕೆ ಪರಿಗಣಿಸಿ, ಕೊಲೆಯತ್ನ ಆರೋಪ ಸಾಬೀತಾಗಿದೆ ಎಂದು ಘೋಷಿಸಿ ಶಿಕ್ಷೆ ವಿಧಿಸಿದ್ದಾರೆ.
ಸರಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News